

ವಿಜಯವಾಣಿ ಸುದ್ದಿಜಾಲ ಸುಳ್ಯ
ಮಂಗಳೂರಿನ ಬ್ಯಾಂಕ್ ಆಫ್ ಬರೋಡಾದಿಂದ ಪ್ರವರ್ತಿಸಲ್ಪಟ್ಟ ವಿಜಯ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ, ಜಾಲ್ಸೂರು ವಿಜಯ ಗ್ರಾಮಾಭಿವೃದ್ಧಿ ಸಮಿತಿ ಆಶ್ರಯದಲ್ಲಿ ಸುಳ್ಯದ ಅರಿವು ಕೃಷಿ ಕ್ಲಿನಿಕ್, ಜಾಲ್ಸೂರಿನ ಕನಕಮಜಲು ಪ್ರಾ.ಕೃ.ಪ.ಸ.ಸಂಘ, ಶ್ರೀ ಸುಬ್ರಹ್ಮಣ್ಯ ಸಂಜೀವಿನಿ ಒಕ್ಕೂಟ ಸಹಯೋಗದೊಂದಿಗೆ ಮಳೆನೀರು ಕೊಯ್ಲು ಪ್ರಾತ್ಯಕ್ಷಿಕೆ ಹಾಗೂ ಮಾಹಿತಿ ಕಾರ್ಯಾಗಾರ ಜಾಲ್ಸೂರು ಗ್ರಾ.ಪಂ. ಸಭಾಭವನದಲ್ಲಿ ಗುರುವಾರ ನಡೆಯಿತು.
ಮಾಧ್ಯಮ ಸಂಸ್ಥೆ ಮುಖ್ಯಸ್ಥ ಡಾ.ಯು.ಪಿ.ಶಿವಾನಂದ ಉದ್ಘಾಟಿಸಿ ಮಾತನಾಡಿ, ನೀರಿನ ಸಮಸ್ಯೆಯಿಂದ ಮುಂದಿನ ದಿನಗಳಲ್ಲಿ ಮಹಾಯುದ್ಧ ಸಂಭವಿಸಿದರೂ, ಆಶ್ಚರ್ಯವಿಲ್ಲ. ಆದ್ದರಿಂದ ಮಳೆಗಾಲದಲ್ಲಿ ಮನೆಯ ಮಹಡಿಯಿಂದ ಬಿದ್ದ ಶುದ್ಧ ನೀರನ್ನು ಟ್ಯಾಂಕ್ ಮೂಲಕ ಸಂಗ್ರಹಿಸಿ, ಬೋರ್‌ವೆಲ್, ಬಾವಿಗೆ ಬಿಡುವುದರಿಂದ ಭೂಮಿಯಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸಬಹುದಾಗಿದೆ. ಮಳೆಕೊಯ್ಲು ಸಂಗ್ರಹದ ಈ ಕಾರ್ಯಕ್ಕೆ ಸರ್ಕಾರದಿಂದಲೂ ಸಬ್ಸಿಡಿ ರೂಪದಲ್ಲಿ ಪ್ರೋತ್ಸಾಹಧನ ದೊರೆಯುತ್ತದೆ ಎಂದರು.
ಜಾಲ್ಸೂರು ಗ್ರಾ.ಪಂ.ಅಧ್ಯಕ್ಷೆ ತಿರುಮಲೇಶ್ವರಿ ಮರಸಂಕ ಅಧ್ಯಕ್ಷತೆ ವಹಿಸಿದ್ದರು. ಪುತ್ತೂರು ಅರಿವು ಕೃಷಿ ಕ್ಲಿನಿಕ್‌ನ ಹೊನ್ನಪ್ಪ ಗೌಡ ಬನ್ನೂರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಳೆನೀರು ಕೊಯ್ಲು ಪ್ರಾತ್ಯಕ್ಷಿಕೆಯ ಮಾಹಿತಿ ನೀಡಿದರು.
ಮಳೆನೀರು ಕೊಯ್ಲು ಪ್ರಾತ್ಯಕ್ಷಿಕೆ ಕಾರ್ಯ ನಡೆಯಿತು. ಕನಕಮಜಲು ಸಹಕಾರಿ ಸಂಘದ ಅಧ್ಯಕ್ಷ ನಾರಾಯಣ ಗೌಡ ಬೊಮ್ಮೆಟ್ಟಿ, ಬ್ಯಾಂಕ್ ಆಫ್ ಬರೋಡಾ ಸುಳ್ಯ ಶಾಖೆಯ ಹಿರಿಯ ಶಾಖಾ ವ್ಯವಸ್ಥಾಪಕ ಅಶೋಕ್ ವಿಮಾನ್, ಎನ್.ಆರ್.ಎಲ್.ಎಂ.ಸುಳ್ಯ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕಿ ಶ್ವೇತಾ, ಜಾಲ್ಸೂರಿನ ವಿಜಯ ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷ ಯಶ್ವಿತ್ ಕಾಳಂಮನೆ, ಕಾರ್ಯದರ್ಶಿ ತಿರುಮಲೇಶ್ವರಿ ಅರ್ಭಡ್ಕ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು ಸೇರಿದಂತೆ ಸುಮಾರು 75ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಭಾಗವಹಿಸಿದ ಎಲ್ಲರಿಗೂ ರಂಬುಟನ್ ಹಣ್ಣಿನ ಗಿಡ ವಿತರಿಸಲಾಯಿತು.