ಬೆಳೆ ಸಮೀಕ್ಷೆಗೆ ಮೊಬೈಲ್ ಆ್ಯಪ್ ಬಳಕೆ ಪ್ರಾತ್ಯಕ್ಷಿಕೆ

DSC_2488
Published on

ತುಮಕೂರು : ರೈತರು ಜಮೀನುಗಳಲ್ಲಿ ತಾವು ಬೆಳೆದ ಬೆಳೆಗಳ ಮಾಹಿತಿಯನ್ನು ಛಾಯಾಚಿತ್ರ ಸಹಿತ ಸ್ವಯಂ ದಾಖಲಿಸುವ ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್ ಬಳಕೆಯ ಪ್ರಾತ್ಯಕ್ಷತೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ ಮಾಧುಸ್ವಾಮಿ ಶನಿವಾರ ವೀಕ್ಷಿಸಿದರು.

ಕೋರ ಹೋಬಳಿಯ ಟಿ.ಗೊಲ್ಲಹಳ್ಳಿ ರೈತ ಬಸವರಾಜು ಜಮೀನಿನಲ್ಲಿ ಬೆಳೆದ ಬೆಳೆಗಳ ಫೋಟೋ ಅಪ್‌ಲೋಡ್ ಮಾಡುವ ಮೂಲಕ ವೀಕ್ಷಿಸಿದ ಸಚಿವರು ರೈತರನ್ನು ಉದ್ದೇಶಿಸಿ ಮಾತನಾಡಿದರು. ಈ ಮೊದಲು ಆಯಾ ಗ್ರಾಮದ ಪಿಆರ್‌ಒ ಗಳು ರೈತರ ಜಮೀನುಗಳಿಗೆ ಬಂದು ಬೆಳೆಯ ಫೋಟೋ ತೆಗೆಯುತ್ತಿದ್ದರು. ಆದರೆ, ಪ್ರಸಕ್ತ ವರ್ಷದಿಂದ ರೈತರು ತಮ್ಮ ಜಮೀನಿನಲ್ಲಿ ಬೆಳೆದಿರುವ ಬೆಳೆಗಳ ಛಾಯಾಚಿತ್ರ ತೆಗೆದು ರೈತರೇ ಸ್ವಯಂ ಅಪ್‌ಲೋಡ್ ಮಾಡಬಹುದಾದ ಆ್ಯಪ್ ಸಿದ್ಧಪಡಿಸಿದ್ದು, ರೈತರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಮಾಧುಸ್ವಾಮಿ ಹೇಳಿದರು.

ಕಳೆದ ವರ್ಷ ಪಹಣಿಯಲ್ಲಿ ಬೆಳೆಯ ವ್ಯತ್ಯಾಸದ ಕಾರಣದಿಂದ ರಾಗಿ, ಶೇಂಗಾ ಮತ್ತಿತರರ ಬೆಳೆಗಳಿಗೆ ಬೆಂಬಲ ಬೆಲೆಯಲ್ಲಿ ಮಾರಾಟ ಮಾಡಲು ರೈತರಿಗೆ ಅವಕಾಶವಾಗಲಿಲ್ಲ, ಎಪಿಎಂಸಿ ಅಧಿಕಾರಿಗಳು ಹಾಗೂ ರೈತರ ನಡುವೆ ಇದೇ ಕಾರಣಕ್ಕೆ ಸಂಘರ್ಷ ಏರ್ಪಟ್ಟು ಸಾಕಷ್ಟು ರೈತರು ತೊಂದರೆ ಅನುಭವಿಸಿದ ಹಿನ್ನೆಲೆಯಲ್ಲಿ ನೂತನ ಆ್ಯಪ್ ತರಲಾಗಿದೆ ಎಂದರು.

ರೈತರು ತಾವು ಬೆಳೆದ ಬೆಳೆಯ ಮಾಹಿತಿಯನ್ನು ಆ್ಯಪ್ ಮೂಲಕ ಸರ್ಕಾರಕ್ಕೆ ಕಳುಹಿಸಬಹುದು. ಅಲ್ಲದೇ ಇದು ದಾಖಲೆಯಾಗುತ್ತದೆ, ಕೂಡಲೇ ಕಾರ್ಯಪ್ರವೃತ್ತರಾಗಿ ತಮ್ಮ ಜಮೀನಿನ ಬೆಳೆ ವಿವರಗಳನ್ನು ಮೊಬೈಲ್ ಮೂಲಕ ಸ್ವಯಂ ದಾಖಲಿಸಬೇಕು. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು. ಇದೇ ಸಂದರ್ಭದಲ್ಲಿ ಬೆಳೆ ಸಮೀಕ್ಷೆ ಮೊಬೈಲ್ ಆಪ್ ಪೋಸ್ಟರ್‌ಗಳನ್ನು ಸಚಿವರು ಬಿಡುಗಡೆಗೊಳಿಸಿದರು.

ಶಾಸಕ ಜಿ.ಬಿ.ಜ್ಯೋತಿಗಣೇಶ್, ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ಕುಮಾರ್, ಜಿಪಂ ಸಿಇಒ ಶುಭಾ ಕಲ್ಯಾಣ್, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ರಾಜ ಸುಲೋಚನಾ, ಅಪರ ಜಿಲ್ಲಾಧಿಕಾರಿ ಚನ್ನಬಸಪ್ಪ, ತಹಸೀಲ್ದಾರ್ ಮೋಹನ್‌ಕುಮಾರ್, ತೋಟಗಾರಿಕಾ ಇಲಾಖೆ ಉಪನಿರ್ದೇಶಕ ರಘು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net