

ವಿಜಯವಾಣಿ ಸುದ್ದಿಜಾಲ ಉಡುಪಿ
ಯಕ್ಷಗಾನ ಕೆಟ್ಟು ಹೋಯ್ತು, ನಾಶವಾಯ್ತು ಎನ್ನುವವರು ಈ ಕಲೆಯ ಉಳಿವಿಗೆ ಎಷ್ಟು ಕೊಡುಗೆ ನೀಡುತ್ತಿದ್ದಾರೆ ಎನ್ನುವುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು. ಯಕ್ಷಗಾನ ಹೀಗಿತ್ತಂತೆ, ಆ ಕಲಾವಿದ ಅದ್ಭುತವಾಗಿ ಅಭಿನಯಿಸಿದನಂತೆ ಎಂಬ ಅಂತೆ-ಕಂತೆ ಕೇಳುತ್ತೇವೆ. ಆದರೆ, ಯಕ್ಷಗಾನ ಅಂದರೆ ಹೀಗಿತ್ತು ಎಂದು ಮುಂದಿನ ಪೀಳಿಗೆಯವರಿಗೆ, ಹೊಸ ಕಲಾವಿದರಿಗೆ ಈ ಪ್ರಾತ್ಯಕ್ಷಿಗೆ ಹಾಗೂ ದಾಖಲೀಕರಣ ಮಾರ್ಗದರ್ಶಕವಾಗಿ ಸದಾ ಇರಲಿದೆ ಎಂದು ಯಕ್ಷಗಾನ ಕಲಾರಂಗ ಉಡುಪಿಯ ಉಪಾಧ್ಯಕ್ಷ ಎಸ್.ವಿ. ಭಟ್ ಅಭಿಪ್ರಾಯಪಟ್ಟರು.
ಉಡುಪಿಯ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಯಕ್ಷಗಾನ ಕೇಂದ್ರ ಇಂದ್ರಾಳಿ ಉಡುಪಿ, ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರ (ಮಾಹೆ) ಹಾಗೂ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಭಾನುವಾರ ಆಯೋಜಿಸಿದ್ದ ಬಡಗುತಿಟ್ಟಿನ ಎರಡನೇ ವೇಷ ಮತ್ತು ಪುರುಷ ವೇಷಗಳ ಯುದ್ಧದ ಸಂದರ್ಭದ ಪ್ರಾತ್ಯಕ್ಷಿಕೆ ಮತ್ತು ದಾಖಲೀಕರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸ್ಕೌಟ್ಸ್ ಆ್ಯಂಡ್ ಗೈಡ್ಸ್ನ ಜಿಲ್ಲಾ ಆಯುಕ್ತ ಇಂದ್ರಾಳಿ ಜಯಕರ್ ಶೆಟ್ಟಿ ಮಾತನಾಡಿ, ಯಕ್ಷಗಾನದ ಹಿಂದಿನ ತಲೆಮಾರಿನ ಅನುಭವ, ವಿಚಾರ ತಿಳಿದುಕೊಳ್ಳಬೇಕಿದೆ. ಕಾಲಕ್ಕೆ ತಕ್ಕಂತೆ ಯಕ್ಷಗಾನ ಬದಲಾವಣೆ ಆಗುತ್ತಿರುವುದು ಸರಿಯಲ್ಲ ಎಂದು ಹೇಳಲಾಗದು. ಆದರೆ, ಕಲಾವಿದರು ಪಾರಂಪರಿಕ ಶೈಲಿ ಬಿಡಬಾರದು. ಮಾತುಗಾರಿಕೆ, ಕುಣಿತ, ಶೌರ್ಯ, ಪರಾಕ್ರಮದ ಸಂದರ್ಭ ಹೇಗಿರಬೇಕು ಎನ್ನುವುದನ್ನು ದಾಖಲೀಕರಣ ಮಾಡುತ್ತಿರುವ ಇಂದ್ರಾಳಿ ಯಕ್ಷಗಾನ ಕೇಂದ್ರಕ್ಕೆ ಅಭಿನಂದಿಸುತ್ತೇನೆ ಎಂದರು.
ಗಣಪತಿ ಸ್ತುತಿ ಮೂಲಕ ನಾಗರಾಜ ಶಂಕರನಾರಾಯಣ ಪ್ರಾರ್ಥಿಸಿದರು. ಇಂದ್ರಾಳಿ ಯಕ್ಷಗಾನ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ.ಜಗದೀಶ ಶೆಟ್ಟಿ ಸ್ವಾಗತಿಸಿದರು. ಸಲಹಾ ಸಮಿತಿಯ ಸದಸ್ಯ ಪ್ರೊ. ಎಸ್.ವಿ. ಉದಯಕುಮಾರ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿರಿಯ ಯಕ್ಷಗಾನ ಕಲಾವಿದ ಐರೋಡಿ ಗೋವಿಂದಪ್ಪ, ಸಲಹಾ ಸಮಿತಿಯ ಸದಸ್ಯ ವಿಶ್ವನಾಥ ಶೆಣೈ ಉಪಸ್ಥಿತರಿದ್ದರು. ಸಲಹಾ ಸಮಿತಿಯ ಅಧ್ಯಕ್ಷ ಪಳ್ಳಿ ಕಿಶನ್ ಹೆಗ್ಡೆ ಸ್ಮರಣಿಕೆ ನೀಡಿದರು. ಉಪನ್ಯಾಸಕ ರಾಘವೇಂದ್ರ ತುಂಗ ಕಾರ್ಯಕ್ರಮ ನಿರೂಪಿಸಿದರು.
ಯಕ್ಷಗಾನ ಪರಂಪರೆಯ ಅನೇಕ ಹೆಜ್ಜೆಗಳು, ಯುದ್ಧ ಪ್ರಕಾರದ ಶೈಲಿಗಳು ವಿರೂಪವಾಗಿದೆ. ಮನಸ್ಸಿಗೆ ಕಂಡ ಹಾಗೆ ಯುದ್ಧ ಸನ್ನಿವೇಶ ಪ್ರಸ್ತುತಪಡಿಸಲಾಗುತ್ತಿದೆ. ವೀರೋಚಿತ, ಶೌರ್ಯ ಪ್ರತಿಕದ ಮಾತುಗಾರಿಕೆಯೂ ಕಂಡುಬರುತ್ತಿಲ್ಲ. ನಾನು ಹೊಡೆಯುವಂತವನಾಗುತ್ತೇನೆ, ನೀನು ಬೀಳುವಂಥವನಾಗು ಎಂಬಲ್ಲಿಗೆ ಯುದ್ಧ ಸನ್ನಿವೇಶ ಬಂದಿದೆ. ಇಂತಹ ಸಂದರ್ಭದಲ್ಲಿ ಪ್ರಾತ್ಯಕ್ಷಿಕೆ ಹಾಗೂ ದಾಖಲೀಕರಣ ಕಾರ್ಯ ಪಾರಂಪರಿಕ ಯಕ್ಷಗಾನ ಕಲೆ ಉಳಿಸುವಲ್ಲಿ ಮಹತ್ವದ್ದಾಗಿದೆ. | ರಾಘವ ಶೆಟ್ಟಿ ಬೇಳೂರು. ಯಕ್ಷಗಾನ ಬರಹಗಾರ
ಕೃಷ್ಣಾರ್ಜುನ ಕಾಳಗ, ಸುಧನ್ವಾರ್ಜುನ ಕಾಳಗ, ಕರ್ಣಾರ್ಜುನ ಕಾಳಗ ಯಕ್ಷಗಾನ ಪ್ರಸಂಗದ ಯುದ್ಧ ಸಂದರ್ಭದ ಕುಣಿತ, ಮಾತುಗಾರಿಕೆ, ಯುದ್ಧ ಶೈಲಿಯ ಪ್ರಾತ್ಯಕ್ಷಿಕೆ ಹಾಗೂ ದಾಖಲೀಕರಣ ಮಾಡಲಾಯಿತು. ಹಿಮ್ಮೇಳದಲ್ಲಿ ಚಂದ್ರಕಾಂತ ರಾವ್ ಮೂಡುಬೆಳ್ಳೆ, ಎನ್.ಜಿ. ಹೆಗಡೆ ಯಲ್ಲಾಪುರ, ರಾಕೇಶ್ ಮಲ್ಲಯ ಹಳ್ಯಾಡಿ, ಕಲಾವಿದರಾದ ಕೋಟ ಸುರೇಶ್ ಬಂಗೇರ, ಪ್ರವೀಣ ಗಾಣಿಗ ಕೆಮ್ಮಣ್ಣು, ನರಾಡಿ ಭೋಜರಾಜ ಶೆಟ್ಟಿ, ಕೊಳಲಿ ಕೃಷ್ಣ ಶೆಟ್ಟಿ, ಆಜ್ರಿ ಗೋಪಾಲ ಗಾಣಿಗ, ಬೆದ್ರಾಡಿ ನರಸಿಂಹ ನಾಯಕ್ ಯುದ್ಧ ಸಂದರ್ಭವನ್ನು ಪ್ರದರ್ಶಿಸಿದರು.