ಮುದ್ದೇಬಿಹಾಳದಲ್ಲಿ ಗೋರಿಗಳ ನೆಲಸಮ

Demolition of tombs at Muddebihala
ಮುದ್ದೇಬಿಹಾಳ ಪಟ್ಟಣದ ತಾಳಿಕೋಟೆ ರಸ್ತೆ ಪಕ್ಕದಲ್ಲಿರುವ ಖಬರಸ್ಥಾನದಲ್ಲಿ ಗೋರಿಗಳನ್ನು ನೆಲಸಮಗೊಳಿಸಿರುವುದನ್ನು ಸಿಪಿಐ ಮಲ್ಲಿಕಾರ್ಜುನ ತುಳಸೀಗೇರಿ ಪರಿಶೀಲಿಸಿದರು. ಪಿಎಸ್​ಐ ಸಂಜಯ ತಿಪ್ಪರಡ್ಡಿ ಇತರರಿದ್ದರು.
Published on

ಮುದ್ದೇಬಿಹಾಳ: ಯಾವುದೇ ಪೂರ್ವ ಮಾಹಿತಿ ಇಲ್ಲದೆ ಏಕಾಏಕಿ ಎರಡು ಜೆಸಿಬಿ ಯಂತ್ರಗಳಿಂದ ಗೋರಿ (ಸಮಾಧಿ)ಗಳನ್ನು ಭಾನುವಾರ ನೆಲಸಮ ಮಾಡಲಾಗಿದೆ.

ಪಟ್ಟಣದ ತಾಳಿಕೋಟೆ ರಸ್ತೆ ಪಕ್ಕದಲ್ಲಿರುವ ಈದಗಾ ಬಳಿಯ ಖಬರಸ್ಥಾನದಲ್ಲಿನ ಸಮಾಧಿಗಳನ್ನು ತೆರವುಗೊಳಿಸಲಾಗಿದೆ. ಟನೆಗೆ ಸಂಬಂಧಿಸಿದಂತೆ ಮುಸ್ಲಿಂ ಮುಖಂಡ, ಪುರಸಭೆ ಸದಸ್ಯ ಮಹಿಬೂಬ ಗೊಳಸಂಗಿ, ಇಲ್ಲಿನ ಪೊಲೀಸ್​ ಠಾಣೆಯಲ್ಲಿ ಜೆಸಿಬಿ ಆಪರೇಟರ್​ ಸಂಗಮೇಶ ಹಿರೇಕುರುಬರ ಮತ್ತು ಜಮೀನು ಮಾಲೀಕರಾದ ನೀಲಮ್ಮ ಬಾರಿಕಾಯಿ (ದಾವಣಗೆರೆ), ವಿಜಯ ಬಾರಿಕಾಯಿ (ಬಾಗಲಕೋಟೆ), ಕಾಶಿನಾಥ ಮಲ್ಲಿಕಾರ್ಜುನ (ದಾವಣಗೆರೆ), ವಿಜಯಲಕ್ಷಿ$್ಮಬಾರಿಕಾಯಿ (ಮುದ್ದೇಬಿಹಾಳ) ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಸ್ಥಳಕ್ಕೆ ತೆರಳಿದ ಸಿಪಿಐ ಮಲ್ಲಿಕಾರ್ಜುನ ತುಳಸೀಗೇರಿ, ಪಿಎಸ್​ಐ ಸಂಜಯ್​ ತಿಪರಡ್ಡಿ ಮತ್ತು ಪೊಲೀಸರು ಎರಡು ಜೆಸಿಬಿ ಯಂತ್ರಗಳನ್ನು ವಶಪಡಿಸಿಕೊಂಡು ಪೊಲೀಸ್​ ಠಾಣೆ ಆವರಣದಲ್ಲಿ ತಂದು ನಿಲ್ಲಿಸಿದ್ದಾರೆ.

ಸರ್ವೇ ನಂಬರ್​ 19/1 ಜಮೀನು ನೀಲಮ್ಮ ಬಾರಿಕಾಯಿ ಮತ್ತು ಇತರರ ಹೆಸರಿನಲ್ಲಿದೆ. ಸರ್ವೇ ನಂ.18, 19/1 ಮತ್ತು 19/2 ಜಮೀನುಗಳಲ್ಲಿ ಅನೇಕ ವರ್ಷಗಳಿಂದ ಮುಸ್ಲಿಮರು ಶವಸಂಸ್ಕಾರ ಮಾಡಿಕೊಂಡು ಬಂದಿದ್ದಾರೆ.

ಪ್ರತಿ ಶುಕ್ರವಾರ ಮೃತರ ಸಂಬಂಧಿಕರು ಗೋರಿಗಳಿರುವ ಜಾಗಕ್ಕೆ ಹೋಗಿ ದರ್ಶನ ಪಡೆದುಕೊಂಡು ಬರುವುದು ರೂಢಿಯಲ್ಲಿದೆ. ಈ ಖಬರಸ್ಥಾನ ಜಾಗದ ಸಲುವಾಗಿ ನಮ್ಮ ಸಮಾಜದವರಿಗೂ, ನೀಲಮ್ಮ ಬಾರಿಕಾಯಿ ಮತ್ತು ಅವರ ಮನೆಯ ಜನರಿಗೂ ತಂಟೆ ತಕರಾರು ನಡೆದು ನ್ಯಾಯಾಲಯದಲ್ಲಿ ದಾವೆ ದಾಖಲಾಗಿದೆ. ವಿಚಾರಣೆ ನಡೆದು ನಮ್ಮ ಸಮಾಜದ ಪರ ತೀರ್ಪು ಬಂದಿದೆ.

ಹೀಗಿದ್ದರೂ ಏಕಾಏಕಿ ಜೆಸಿಬಿ ಬಳಸಿ ಅಂದಾಜು 70&80 ಗೋರಿಗಳನ್ನು ನೆಲಸಮ ಮಾಡಲಾಗಿದೆ. ತಡೆಯಲು ಹೋದ ನಮ್ಮ ಮೇಲೂ ಹಲ್ಲೆ ನಡೆಸಲಾಗಿದೆ. ಇದರಿಂದ ನಮ್ಮ ಧಾರ್ಮಿಕ ಭಾವನೆಗಳಿಗೆ ಆಘಾತ ಉಂಟಾಗಿದೆ. ಜೀವ ಬೆದರಿಕೆ ಹಾಕಲಾಗಿದೆ ಎಂದು ದೂರಿನಲ್ಲಿ ಪುರಸಭೆ ಸದಸ್ಯ ಮಹಿಬೂಬ ಗೊಳಸಂಗಿ ತಿಳಿಸಿದದ್​ಆರೆ.

ಏತನ್ಮಧ್ಯೆ ವಿವಾದದಲ್ಲಿರುವ ಜಮೀನಿನ ಪ್ರಕರಣ ಕೋರ್ಟ್​ನಲ್ಲಿ ಇತ್ಯರ್ಥಗೊಂಡಿದ್ದರಿಂದ ಮಾಲೀಕರು ಬೇರೆಯವರಿಗೆ ಅದನ್ನು ಉಳುಮೆ ಮಾಡಲು ಕೊಟ್ಟಿದ್ದರು. ಜಮೀನು ಉಳುಮೆಗೆ ಹಿಡಿದವರು ಗೋರಿಗಳು ತಮ್ಮ ಮಾಲೀಕರ ಜಮೀನಿನಲ್ಲಿ ಇವೆಯೋ, ಇಲ್ಲವೋ ಎನ್ನುವುದನ್ನು ಅರಿಯದೆ, ಗೋರಿಗಳ ಮತ್ತು ಜಮೀನುಗಳ ಪೂರ್ವಾಪರ ತಿಳಿಯದೆ ಹೀಗೆ ಮಾಡಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net