

ಉಪ್ಪಿನಂಗಡಿ: ಮನೆ ಇಲ್ಲದ ಬಡ ಮಹಿಳೆಯೋರ್ವರು ಸರ್ಕಾರಿ ಜಾಗದಲ್ಲಿ ನಿರ್ಮಿಸುತ್ತಿರುವ ಮನೆಯನ್ನು ಕಿಡಿಗೇಡಿಗಳು ಧ್ವಂಸಗೊಳಿಸಿ ವಿಕೃತಿ ಮೆರೆದ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ.
ಮಮತಾ ಎಂಬುವರು ಈ ಬಗ್ಗೆ ದೂರಿದ್ದು, ಈಕೆಯ ಪತಿ ಆನಂದ ಎಂಬುವರು ಪುತ್ತೂರು ನಗರಸಭೆಗೆ ಸೇರಿದ ರೇಚಕ ಸ್ಥಾವರ (ಕುಡಿಯುವ ನೀರು ಶುದ್ಧೀಕರಣ ಘಟಕ)ದಲ್ಲಿ ಕಳೆದ 18 ವರ್ಷಗಳಿಂದ ಕೆಲಸ ಮಾಡಿಕೊಂಡಿದ್ದರು. ಗುತ್ತಿಗೆದಾರರು ಬದಲಾದರೆಂಬ ಕಾರಣದಿಂದ ಅವರನ್ನು ಜನವರಿ 1ರಂದು ಕೆಲಸದಿಂದ ತೆಗೆಯಲಾಗಿತ್ತು. ಅಲ್ಲಿಯವರೆಗೆ ಅವರಿಗೆ ಅಲ್ಲಿನ ಇಲಾಖಾ ವಸತಿ ಗೃಹದಲ್ಲಿ ವಾಸಕ್ಕೆ ಅನುವು ಮಾಡಿಕೊಡಲಾಗಿತ್ತು. ಕೆಲಸ ಕಳೆದುಕೊಂಡು ಮನೆಯನ್ನೂ ಕಳೆದುಕೊಂಡ ಬಳಿಕ ವಾಸ್ತವ್ಯಕ್ಕಾಗಿ ರೇಚಕ ಸ್ಥಾವರದ ಬಳಿಯಿರುವ ಎರಡು ಸೆಂಟ್ಸ್ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡು ಮನೆ ನಿರ್ಮಿಸುತ್ತಿದ್ದೆವು. ತನ್ನ ಚಿನ್ನಾಭರಣವನ್ನು ಮಾರಿ ಮನೆಯನ್ನು ನಿರ್ಮಿಸುತ್ತಿದ್ದ ವೇಳೆ ಸ್ಥಳೀಯ ನಿವಾಸಿಯೋರ್ವರು ಆಕ್ಷೇಪ ವ್ಯಕ್ತಪಡಿಸಿದ್ದರು.
ಈ ಮಧ್ಯೆ ತನ್ನ ಕುಟುಂಬ ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆದಿದ್ದ ವೇಳೆ ಸರ್ಕಾರಿ ಜಾಗದಲ್ಲಿ ಕಟ್ಟಿದ ಮನೆಯನ್ನು ಸಂಪೂರ್ಣವಾಗಿ ಕೆಡವಲಾಗಿದೆ ಎಂದು ದೂರಿದ್ದಾರೆ.
ಒಂದೆಡೆ ಕೆಲಸ ಕಳೆದುಕೊಂಡು ಪತಿ. ಮನೆಯಲ್ಲಿ ಎಂಬಿಎ ಓದುತ್ತಿರುವ ಪುತ್ರ, ದ್ವಿತೀಯ ಪಿಯುಸಿ ಓದುತ್ತಿರುವ ಪುತ್ರಿಯೊಂದಿಗೆ ಸಂಕಷ್ಟದ ಜೀವನ ನಡೆಸುತ್ತಿರುವ ತಮ್ಮನ್ನು ಬೀದಿಗೆ ತಳ್ಳಲಾಗಿದೆ ಎಂದು ಧ್ವಂಸಗೊಂಡ ಮನೆಯ ಮುಂದೆ ಮಮತಾ ರೋಧಿಸುತ್ತಿದ್ದಾರೆ.