ಧಿಡೀರ್ ಕಾರ್ಯಾಚರಣೆಯಲ್ಲಿ ಮನೆಗಳು ನೆಲಸಮ

Akrama Manegal teravu News- ph 4
ತಹಸೀಲ್ದಾರ್ ಬಾಲಕೃಷ್ಣ ನೇತೃತ್ವದಲ್ಲಿ ದೇವನಹಳ್ಳಿಯ ಬೊಮ್ಮವಾರ ರಸ್ತೆಯಲ್ಲಿ ಮನೆಗಳ ತೆರವು ಕಾರ್ಯಾಚರಣೆ ನಡೆಯಿತು.
Published on

ವಿಜಯವಾಣಿ ಸುದ್ದಿಜಾಲ ದೇವನಹಳ್ಳಿ
ಪಟ್ಟಣದ ಬೊಮ್ಮವಾರ ಅಕ್ಕೂಪೇಟೆ ರಸ್ತೆಯಲ್ಲಿನ ಸ.36ರಲ್ಲಿ ಅನಧಿಕೃತವಾಗಿ ನಿರ್ಮಿಸಿಕೊಳ್ಳಲಾಗಿದೆ ಎನ್ನಲಾದ 6 ಮನೆಗಳನ್ನು ತಾಲೂಕು ಆಡಳಿತ ನೆಲಸಮಗೊಳಿಸಿದೆ.
ಪೊಲೀಸರ ನೆರವಿನೊಂದಿಗೆ ತಹಸೀಲ್ದಾರ್ ಎಚ್.ಬಾಲಕೃಷ್ಣ ನೇತೃತ್ವದಲ್ಲಿ ದಿಢೀರ್ ಕಾರ್ಯಾಚರಣೆ ನಡೆಸಿದ್ದು, ಇನ್ನೂ 20 ಕ್ಕೂ ಹೆಚ್ಚು ಮನೆಗಳು ನೆಲಸಮಗೊಳ್ಳಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಾಕಿ ಇರುವ ಮನೆಗಳ ತೆರವು ಕಾರ್ಯಾಚರಣೆ ವಿರುದ್ಧ ನಿವಾಸಿಗಳು ಆತಂಕಗೊಂಡಿದ್ದಾರೆ.
ಮಾತಿನ ಚಕಮಕಿ: ಕಾರ್ಯಾಚರಣೆ ವೇಳೆ ಸ್ಥಳದಲ್ಲಿ ಕೆಲ ಮುಖಂಡರು ಹಾಗೂ ಸಂಘಟನೆಗಳು ತಹಸೀಲ್ದಾರ್ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಅಧಿಕಾರಿಗಳು ಹಾಗೂ ಸ್ಥಳೀಯರ ನಡುವೆ ಮಾತಿನ ಚಕಮಕಿ ನಡೆಯಿತು.
ಕಣ್ಣೀರಿಟ್ಟ ಮಹಿಳೆಯರು: ಸರ್ಕಾರಿ ಜಾಗ ಎನ್ನಲಾದ ಸ್ಥಳದಲ್ಲಿ ಕೆಲವು ಗ್ರಾಪಂ ಸದಸ್ಯರ ಮಾತು ಕೇಳಿಕೊಂಡು ತಾತ್ಕಾಲಿಕವಾಗಿ ಮನೆಗಳನ್ನು ನಿರ್ಮಿಸಿಕೊಳ್ಳಲಾಗಿದೆ ಎನ್ನಲಾಗಿದ್ದು, ದಿಢೀರ್ ಕಾರ್ಯಾಚರಣೆಯಿಂದ ಮನೆ ಕಳೆದುಕೊಂಡ ಮಹಿಳೆಯರು ಅಧಿಕಾರಿಗಳ ಎದುರು ಕಣ್ಣೀರು ಸುರಿಸಿದ ದೃಶ್ಯ ಕಂಡುಬಂತು.
ಮೇಲಾಧಿಕಾರಿಗಳ ಆದೇಶ ಪಾಲನೆ: ಬೊಮ್ಮವಾರ ಗ್ರಾಮದ ಸ.ನಂ.36 ರಲ್ಲಿ 9.38 ಗುಂಟೆ ಭೂಮಿಯನ್ನು ನಿವೇಶನಗಳಿಗಾಗಿ ಕಾಯ್ದಿರಿಸಲಾಗಿದೆ. ಆದರೆ ಇಲ್ಲಿ ಕೆಲವರು ಸಂಘಟನೆಗಳ ಹೆಸರು ಹೇಳಿಕೊಂಡು ಏನೂ ಅರಿಯದ ಜನರನ್ನು ಕರೆತಂದು ಇಲ್ಲಿ ಮನೆಗಳನ್ನು ನಿರ್ಮಿಸಲು ಸೂಚಿಸಿದ್ದಾರೆ. ಸರ್ಕಾರ ಇಲ್ಲಿ ಯಾರಿಗೂ ಹಕ್ಕು ಪತ್ರ ಅಥವಾ ನಿವೇಶನ ಮಂಜೂರಾತಿ ಮಾಡಿಲ್ಲ. ಸರ್ಕಾರಿ ಜಾಗದಲ್ಲಿ ಮನೆಗಳನ್ನು ನಿರ್ಮಿಸಿಕೊಳ್ಳಲು ಸೂಚಿಸಿಲ್ಲ. ಹಾಗಾಗಿ ಮೇಲಾಧಿಕಾರಿಗಳ ನಿರ್ದೇಶನದಂತೆ ತೆರವು ಕಾರ್ಯಾಚರಣೆ ಮಾಡಲಾಗಿದೆ ಎಂದು ತಹಸೀಲ್ದಾರ್ ಪ್ರತಿಕ್ರಿಯಿಸಿದರು.
ನಾವು ಬಡವರು. ಮೂವರು ಹೆಣ್ಣು ಮಕ್ಕಳಿದ್ದಾರೆ. ಊರಿನ ಮುಖಂಡರು ಹೇಳಿದ್ದರಿಂದ ಸಾಲ ಮಾಡಿ ಮನೆ ಕಟ್ಟಿದೆ. ಆದರೆ ಮನೆ ಕೆಡವಿದ್ದಾರೆ ಎಂದು ಲಲಿತಮ್ಮ ಅಲವತ್ತುಕೊಂಡರು.
ಮನೆ ಕೆಡವಲು ಬಂದಿದ್ದಾರೆ ! ನಿವೇಶನಗಳಿಗಾಗಿ ನಾವು 20 ವರ್ಷದಿಂದ ಹೋರಾಟ ಮಾಡಿಕೊಂಡು ಬಂದಿದ್ದೇವೆ. 3 ಎಕರೆ ಒಂದು ಬ್ಲಾಕ್, 6 ಎಕರೆ 26 ಗುಂಟೆ ಒಂದು ಬ್ಲಾಕ್ ಮಾಡಿದ್ದರು. ಅದರಲ್ಲಿ ಈ ಬ್ಲಾಕ್‌ನಲ್ಲಿ ನಾವು ಮನೆ ಕಟ್ಟಿಕೊಳ್ಳಲು ಹೋದರೆ ಅದನ್ನು ಏಕಾಏಕಿ ತೆರವು ಮಾಡಿಸಲು ಬಂದಿದ್ದಾರೆ. 3 ಎಕರೆ 26 ಗುಂಟೆ ಲೇಔಟ್ ಕಬಳಿಕೆ ಮಾಡಿದ್ದಾರೆ. ಅದನ್ನು ಬಿಟ್ಟು ಬಡವರ ಮನೆ ಕೆಡವಲು ಬಂದಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net