

ಭದ್ರಾವತಿ: ಇಲ್ಲಿನ ಸಿದ್ಧರೂಢನಗರದ ವಾರ್ಡ್ ನಂ.6ರ 1ನೇ ತಿರುವಿನಲ್ಲಿರುವ ಅಕ್ರಮ ಕಟ್ಟಡ ತೆರವುಗೊಳಿಸುವಂತೆ ಆಗ್ರಹಿಸಿ ಡಾ. ಬಿ.ಆರ್.ಅಂಬೇಡ್ಕರ್ ಆದಿಜಾಂಬವ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ನಗರಸಭೆ ಮುಂಭಾಗದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ಹಣದ ಆಮಿಷಕ್ಕೆ ಒಳಗಾಗಿ ನಗರಸಭೆ ಆಯುಕ್ತರು ಅಕ್ರಮ ಕಟ್ಟಡ ಮಾಲೀಕರಿಗೆ ಸಹಕಾರ ನೀಡುತ್ತಿದ್ದಾರೆ ಎಂದು ಆರೋಪಿಸಿದ ಪ್ರತಿಭಟನಾನಿರತರು, ಭೂ ಪರಿವರ್ತನೆಯಾಗದೆ ನಿರ್ಮಾಣವಾಗಿರುವ ಅಕ್ರಮ ಕಟ್ಟಡಗಳು ನೆಲಸಮಗೊಳಿಸಬೇಕು. ಕೃತ್ಯಕ್ಕೆ ಸಹಕಾರ ನೀಡಿದ ಆಯುಕ್ತರನ್ನು ಸೇವೆಯಿಂದ ವಜಾಗೊಳಿಸಬೇಕು. ಸರ್ಕಾರಕ್ಕೆ ತೆರಿಗೆ ವಂಚನೆ ಮಾಡಿ ಅಕ್ರಮ ಕಟ್ಟಡ ನಿರ್ಮಾಣ ಮಾಡಿದವರ ವಿರುದ್ಧ ಪ್ರಕರಣ ದಾಖಲಿಸಿ ತಪ್ಪಿತಸ್ಥರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಬೇಕು. ಈ ಪ್ರಕರಣದಲ್ಲಿ ಶಾಮೀಲಾಗಿರುವ ಅಧಿಕಾರಿಗಳ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಸಂಘದ ತಾಲೂಕು ಸಂಘಟನಾ ಸಂಚಾಲಕ ಕುಮಾರ್, ಮುಖಂಡರಾದ ಬಿ.ಎಲ್.ಮಂಜುನಾಥ್, ರವಿನಾಯ್ಕ, ಕೆ.ಪ್ರತಾಪ್, ಕರಿಬಸಪ್ಪ ಇತರಿದ್ದರು.