

ಹಗರಿಬೊಮ್ಮನಹಳ್ಳಿ: ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಮೇಲೆ ಶೂ ಎಸೆಯಲು ಯತ್ನಿಸಿದ ವಕೀಲ ರಾಕೇಶ ಕಿಶೋರ್ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಹೈಕೋರ್ಟ್ ವಕೀಲರ ಸಂಘದ ಮಾಜಿ ಅಧ್ಯಕ್ಷ ಅನಿಲ್ ಮಿಶ್ರಾ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಉಪ ತಹಸೀಲ್ದಾರ್ ಶಿವಕುಮಾರಗೆ ದಲಿತ ಸಂಘಟನೆಗಳ ಜಂಟಿ ಹೋರಾಟ ಸಮಿತಿಯಿಂದ ಶುಕ್ರವಾರ ಮನವಿ ಸಲ್ಲಿಸಲಾಯಿತು.
ಡಾ.ಬಿ.ಆರ್.ಅಂಬೇಡ್ಕರ್ ಸಂಘದ ತಾಲೂಕು ಅಧ್ಯಕ್ಷ ಗದ್ದಿಕೆರೆ ಎಚ್.ದೊಡ್ಡಬಸಪ್ಪ ಮಾತನಾಡಿ, ಮಾನಸಿಕ ಸ್ಥಿಮಿತ ಕಳೆದುಕೊಂಡ ವಕೀಲನೊಬ್ಬ ನ್ಯಾಯಾಲಯದ ಕಲಾಪ ನಡೆಯುತ್ತಿರುವ ಸಮಯದಲ್ಲಿ ಬೂಟು ಎಸೆಯುವ ಪ್ರಯತ್ನ ಮಾಡಿದ್ದಾನೆ. ಸಮಸ್ತ ಭಾರತೀಯರಿಗೆ ಮಾನವ ಹಕ್ಕು ಮತ್ತು ಅವಕಾಶಗಳನ್ನು ಕಲ್ಪಿಸುವ ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬುಡಮೇಲು ಮಾಡುವ ಬಹುದೊಡ್ಡ ಷಡ್ಯಂತ್ರವಾಗಿದೆ. ಹೈಕೋರ್ಟ್ ವಕೀಲರ ಸಂಘದ ಮಾಜಿ ಅಧ್ಯಕ್ಷ ಅನಿಲ್ ಮಿಶ್ರಾ ಡಾ.ಬಿ.ಆರ್.ಅಂಬೇಡ್ಕರ್ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದರು.
ಇದಕ್ಕೂ ಮುನ್ನ ಪಟ್ಟಣದ ರಾಮನಗರದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಬಸವೇಶ್ವರ ಬಜಾರ್‌ವರೆಗೆ ಮೆರವಣಿಗೆ ನಡೆಸಲಾಯಿತು. ಪ್ರಮುಖರಾದ ಯಡ್ರಮ್ಮನಹಳ್ಳಿ ಮರಿಯಪ್ಪ, ಬಿ.ಜಿ.ಹಳ್ಳಿ ಮಹೇಶ, ಮಾದೂರು ಮಹೇಶ್ವರ, ಮೇಘರಾಜ ಒಂಟಿ, ಎಚ್.ಪ್ರಭಾಕರ, ದುರುಗಪ್ಪ ಪೂಜಾರ್, ಯಮನೂರಪ್ಪ, ಬೆಣಕಲ್ಲು ಪ್ರಕಾಶ, ಪೂಜಾರ್ ಸಿದ್ದಪ್ಪ, ಉಪ್ಪಾರಗಟ್ಟಿ ಬುಳ್ಳಪ್ಪ, ಟಿ.ಅರ್ಜುನ್, ಓಮೇಶ, ಎಚ್.ಆರ್.ರಾಜ, ಎ.ದೊಡ್ಡ ಬಸವರಾಜ, ಹಮಾಲಿ ನಿಂಗಪ್ಪ, ದಶಮಾರ ಮರಿಯಪ್ಪ, ಕೆ.ರಮೇಶ, ಪೂಜಾರ್ ಲೋಕಪ್ಪ, ಬಂಗಾಳಿ ಹನುಮಂತ, ಕಬ್ಬಳ್ಳಿ ಮೈಲಪ್ಪ, ಕೆ.ದುರುಗಪ್ಪ, ಬ್ಯಾಲಾಳ್ ಮಂಜುನಾಥ, ಅಲಬೂರು ಗಣೇಶ ಇತರರಿದ್ದರು.