

ಪಿರಿಯಾಪಟ್ಟಣ: ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಷಾ ಅವರು ಚುನಾವಣಾ ಆಯೋಗವನ್ನು ತಮ್ಮ ಕೈಗೊಂಬೆಯಾಗಿ ಮಾಡಿಕೊಂಡು ಮತಗಳ್ಳತನದ ಮೂಲಕ ಅಧಿಕಾರಕ್ಕೆ ಬಂದು ಪ್ರಜಾತಂತ್ರ ವ್ಯವಸ್ಥೆಯನ್ನು ತಲೆಕೆಳಗೆ ಮಾಡಿದ್ದಾರೆ ಎಂದು ಪಶು ಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ.ವೆಂಕಟೇಶ್ ತಿಳಿಸಿದರು.
ಪಟ್ಟಣದ ಕಾಂಗ್ರೆಸ್ ಕಚೇರಿ ಆವರಣದಲ್ಲಿ ಪಿರಿಯಾಪಟ್ಟಣ ಮತ್ತು ಬೆಟ್ಟದಪುರ ಬ್ಲಾಕ್ ಕಾಂಗ್ರೆಸ್ ಘಟಕಗಳ ವತಿಯಿಂದ ಭಾನುವಾರ ಏರ್ಪಡಿಸಿದ್ದ ವೋಟ್ ಚೋರಿ ಸಹಿ ಸಂಗ್ರಹ ಅಭಿಯಾನ ಉದ್ಘಾಟಿಸಿ ಮಾತನಾಡಿದರು.
ಪ್ರಜಾಪ್ರಭುತ್ವವನ್ನು ರಕ್ಷಿಸಬೇಕು ಮತ್ತು ಮತದಾರರ ಹಕ್ಕನ್ನು ಉಳಿಸಬೇಕು ಎಂಬ ಉದ್ದೇಶದಿಂದ ಮತಗಳವು ತಡೆಯಲು ವಿಫಲವಾಗಿರುವ ಚುನಾವಣಾ ಆಯೋಗವನ್ನು ಎಚ್ಚರಿಸಲು ವೋಟ್ ಚೋರಿ ಸಹಿ ಸಂಗ್ರಹ ಅಭಿಯಾನ ನಡೆಸಲಾಗುತ್ತಿದೆ. ರಾಜ್ಯವೂ ಸೇರಿದಂತೆ ದೇಶಾದ್ಯಂತ ಕಾಂಗ್ರೆಸ್ ಗೆಲ್ಲಲು ಅವಕಾಶವಿದ್ದ ಹಲವು ಕಡೆ ಮತದಾರರ ಪಟ್ಟಿಯಿಂದ ಕಾಂಗ್ರೆಸ್ ಮತದಾರರನ್ನು ತೆಗೆದುಹಾಕುವುದು, ಬಿಜೆಪಿ ಮತದಾರರನ್ನು ಸೇರ್ಪಡೆ ಮಾಡುವ ಕೆಲಸವನ್ನು ವ್ಯವಸ್ಥಿತವಾಗಿ ಮಾಡುವ ಮೂಲಕ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬಂದಿದೆ. ಇದನ್ನು ಪತ್ತೆ ಹಚ್ಚಿ ಚುನಾವಣಾ ಆಯೋಗಕ್ಕೆ ಸಾಕ್ಷಿ ಸಮೇತ ದೂರು ನೀಡಿದರೂ ಸಹಾ ಆಯೋಗ ನಿರ್ಲಕ್ಷ್ಯ ವಹಿಸಿದೆ ಎಂದು ದೂರಿದರು.
ನ್ಯಾಯ ಬದ್ಧವಾಗಿ ಚುನಾವಣೆ ನಡೆಯುತ್ತಿಲ್ಲ, ಈ ರೀತಿ ಅಕ್ರಮ ಮಾರ್ಗದಿಂದ ಗೆಲುವು ಸಾಧಿಸಿದರೆ ಪ್ರಜಾಪ್ರಭುತ್ವಕ್ಕೆಲ್ಲಿ ಬೆಲೆ ಇದೆ ಎಂದು ಪ್ರಶ್ನಿಸಿದ ಸಚಿವರು, ಚುನಾವಣಾ ಆಯೋಗ ಬಿಜೆಪಿಯ ಕೈಗೊಂಬೆಯಂತೆ ವರ್ತಿಸುತ್ತಿದೆ. ಮುಂದೆ ನಮ್ಮ ರಾಜ್ಯದಲ್ಲಿ ನಡೆಯಲಿರುವ ಜಿ.ಪಂ. ಮತ್ತು ತಾ.ಪಂ. ಚುನಾವಣೆಗಳಲ್ಲಿ ಎಲೆಕ್ಟ್ರಾನಿಕ್ ಮತ ಯಂತ್ರದ ಬದಲು ಮತಪತ್ರಗಳನ್ನು ಉಪಯೋಗಿಸುವಂತೆ ಸಚಿವ ಸಂಪುಟ ನಿರ್ಣಯ ಕೈಗೊಂಡು ಚುನಾವಣಾ ಆಯೋಗಕ್ಕೆ ಕಳುಹಿಸಿಕೊಟ್ಟಿದೆ ಎಂದರು.
ಈ ಅಭಿಯಾನ ಯಶಸ್ವಿಯಾಗಲು ಕಾರ್ಯಕರ್ತರು ಸಹಕರಿಸಬೇಕಿದೆ, ಸಂವಿಧಾನ ಉಳಿಸುವ ಸಲುವಾಗಿ ಮತ್ತು ದೇಶದ ಹಿತ ದೃಷ್ಟಿಯಿಂದ ಈ ಅಭಿಯಾನ ಅತ್ಯಂತ ಅಗತ್ಯ ಎಂದು ತಿಳಿಸಿದರು.
ಮೈಲಾಕ್ ಅಧ್ಯಕ್ಷ ಎಚ್.ಡಿ.ಗಣೇಶ್ ಮಾತನಾಡಿ, ಪ್ರಜಾಪ್ರಭುತ್ವದ ಭದ್ರ ಬುನಾದಿಯೇ ಪಾರದರ್ಶಕ ಮತದಾನ ವ್ಯವಸ್ಥೆಯಾಗಿದೆ. ಆದರೆ ಈ ವ್ಯವಸ್ಥೆಯನ್ನೇ ಬುಡಮೇಲು ಮಾಡಲು ಬಿಜೆಪಿ ಮತಗಳವು ಕೃತ್ಯದಲ್ಲಿ ತೊಡಗುವ ಮೂಲಕ ಪ್ರಜಾಪ್ರಭುತ್ವವನ್ನು ಅಪಾಯಕ್ಕೆ ಒಡ್ದುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕೆಪಿಸಿಸಿ ಸದಸ್ಯ ನಿತಿನ್ ವೆಂಕಟೇಶ್ ಮಾತನಾಡಿ, ಪ್ರತಿ ಜಿಲ್ಲೆಯಲ್ಲೂ 2 ಲಕ್ಷ ಸಹಿ ಸಂಗ್ರಹದ ಗುರಿಯನ್ನು ಕೆಪಿಸಿಸಿ ನೀಡಿದ್ದು, ನಮ್ಮ ತಾಲೂಕಿನಲ್ಲಿ ಕನಿಷ್ಠ 10 ಸಾವಿರಕ್ಕೂ ಹೆಚ್ಚು ಸಹಿ ಸಂಗ್ರಹಿಸಬೇಕಿದೆ. ಕಾರ್ಯಕರ್ತರು ಇದನ್ನು ಗಂಭೀರವಾಗಿ ಪರಿಗಣಿಸಿ ಈ ಅಭಿಯಾನವನ್ನು ಯಶಸ್ವಿ ಮಾಡಬೇಕು ಎಂದು ಮನವಿ ಮಾಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಡಿ.ಟಿ.ಸ್ವಾಮಿ, ರಹಮತ್ ಜಾನ್ ಬಾಬು, ಮಾಜಿ ಅಧ್ಯಕ್ಷ ಮಾನ್ಸೂನ್ ಚಂದ್ರು, ನಗರ ಘಟಕದ ಅಧ್ಯಕ್ಷ ಅಶೋಕ್ ಕುಮಾರ್ ಗೌಡ, ಮೈಮುಲ್ ನಿರ್ದೇಶಕ ಬಿ.ಎ.ಪ್ರಕಾಶ್ ಸೇರಿದಂತೆ ಹಲವು ಹಿರಿಯ ಮುಖಂಡರು ಕಾರ್ಯಕರ್ತರು ಹಾಜರಿದ್ದರು.