

ಕಿಕ್ಕೇರಿ: ಸರ್ವರಿಗೂ ಸಮಪಾಲು, ಸಮಬಾಳು ಸಿಗಬೇಕು ಎಂಬುದೇ ಪ್ರಜಾಪ್ರಭುತ್ವ ದಿನದ ಆಶಯ ಎಂದು ಸಮಾಜ ಸೇವಕ ಸತೀಶ್ ತಿಳಿಸಿದರು.
ಇಲ್ಲಿನ ಕನ್ನಡ ಕಲಾ ಸಂಘ, ಸ್ಪಂದನಾ ಫೌಂಡೇಷನ್ ಸಹಯೋಗದಲ್ಲಿ ಈಚೆಗೆ ಆಯೋಜಿಸಿದ್ದ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಬಾಲ್ಯದಿಂದಲೇ ಮಕ್ಕಳಲ್ಲಿ ನಮ್ಮ ದೇಶ, ಪ್ರಜಾಪ್ರಭುತ್ವದ ಒಕ್ಕೂಟ ವ್ಯವಸ್ಥೆ, ಸಮಾನತೆ ಪಾಠ ಕಲಿಸಿದರೆ ವಿಶ್ವಮಾನ್ಯರಾಗಿ ಇಡೀ ಜಗತ್ತಿನಲ್ಲಿ ನೆಮ್ಮದಿಯಿಂದ ಬದುಕಬಹುದಾಗಿದೆ ಎಂದರು.
ಸಮಾಜ ಸೇವಕಿ ಕವಿತಾ ಮಾತನಾಡಿ, ಕನ್ನಡ ಕಲಾ ಸಂಘ ಗ್ರಾಮದಲ್ಲಿ ಹತ್ತು ಹಲವು ಜನಜಾಗೃತಿ ಸಮಾಜಮುಖಿ ಕೆಲಸ ಮಾಡುತ್ತಿದೆ. ಇಡೀ ರಾಜ್ಯದಲ್ಲಿ ಮಾದರಿ ಸಂಘವಾಗಿ ಕನ್ನಡ ಕಟ್ಟುವ, ಉಳಿಸಿ, ಬಳಸಿ, ಬೆಳೆಸುವ ಕೆಲಸ ಮಾಡುತ್ತಿದೆ ಎಂದರು.
ಸ್ಪಂದನಾ ಫೌಂಡೇಷನ್ ಟ್ರಸ್ಟಿ ತ್ರಿವೇಣಿ ಮಾತನಾಡಿ, ಪ್ರಜಾಪ್ರಭುತ್ವ ಜನರಿಗಾಗಿ ಇದ್ದು, ಇದರ ಸಾರವನ್ನು ಅಂಬೇಡ್ಕರ್ ಆಶಯದಂತೆ ತಿಳಿದು ಬದುಕಬೇಕಿದೆ. ಒಕ್ಕೂಟ ವ್ಯವಸ್ಥೆಯ ಗಣತಂತ್ರ ನಾಡಿನಲ್ಲಿ ಪ್ರಜೆಗಳೇ ಸಾರ್ವಭೌಮ. ಆರ್ಥಿಕ, ಶೈಕ್ಷಣಿಕೆ, ಉದ್ಯೋಗದಲ್ಲಿ ಸಮಾನತೆ ದೊರೆತಾಗ ಮಾತ್ರ ಪ್ರಜಾಪ್ರಭುತ್ವಕ್ಕೆ ನಿಜವಾದ ಅರ್ಥ ಸಿಗಲಿದೆ. ಎಲ್ಲರಲ್ಲಿಯೂ ಹರಿಯುತ್ತಿರುವುದು ಒಂದೇ ರಕ್ತ. ಹುಟ್ಟು ಸಾವಿನ ನಡುವೆ ಸಮಾನತೆಯಿಂದ ಬದುಕಲು ಮಕ್ಕಳಲ್ಲಿ ತಾರತಮ್ಯ ಭಾವವನ್ನು ಮೊದಲು ದೂರ ಸರಿಸಬೇಕಿದೆ ಎಂದು ಹೇಳಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಬದುಕುವ ಸ್ವಾತಂತ್ರ್ಯದ ಹಕ್ಕಿದೆ. ಹುಟ್ಟಿನಿಂದ ಸಾವಿನವರೆಗೆ ಸಂವಿಧಾನದ ಕಾನೂನು ತಳಹದಿಯಲ್ಲಿ ಬದುಕಬೇಕಿದೆ. ಇಡೀ ವಿಶ್ವವೇ ನಮ್ಮ ಸಂವಿಧಾನ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗೌರವಿಸುತ್ತಿದೆ. ಮತದಾನದ ಹಕ್ಕಿನಿಂದ ಉತ್ತಮ ನಾಯಕ, ದೇಶ ಕಟ್ಟಬೇಕಾಗಿದೆ ಎಂದರು. ವಿದ್ಯಾರ್ಥಿಗಳು ಪ್ರತಿಜ್ಞಾ ವಿಧಿ ಸ್ವೀಕರಿಸಿದರು.