ಪ್ರಜಾಪ್ರಭುತ್ವ ದಿನ: ಹೆಸರು ನೋಂದಾಯಿಸಲು ಮನವಿ

B.N.veena
Published on

ಮಡಿಕೇರಿ: ಭಾರತ ದೇಶದ ಪ್ರಜೆಯಾಗಿ ಹೆಮ್ಮೆಪಡಲು ಸರ್ಕಾರ ಪ್ರತಿಯೊಬ್ಬರಿಗೂ ಸುವರ್ಣಾವಕಾಶ ಕಲ್ಪಿಸಿದ್ದು, ಸೆ.೧೫ ರಂದು ಭಾರತ ಸಂವಿಧಾನದ ಪೀಠಿಕೆ ಓದಲು ಹೆಚ್ಚು ಜನರು, ಶಾಲಾ ಕಾಲೇಜುಗಳು, ಸರ್ಕಾರಿ ಕಚೇರಿ, ಸ್ವಯಂ ಸೇವಾ ಸಂಸ್ಥೆಗಳು, ಸಾರ್ವಜನಿಕರು ಆನ್‌ಲೈನ್ ಮೂಲಕ ಸೆ.೧೪ ರೊಳಗೆ ಹೆಸರು ನೋಂದಣಿ ಮಾಡಿಕೊಳ್ಳುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್.ವೀಣಾ ಮನವಿ ಮಾಡಿದ್ದಾರೆ.


ಸೆ.೧೫ ರಂದು ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಆಚರಿಸುವ ನಿಟ್ಟಿನಲ್ಲಿ ವಿಡಿಯೊ ಸಂವಾದ ಮೂಲಕ ಇತ್ತೀಚೆಗೆ ಅಧಿಕಾರಿಗಳ ಜತೆ ಸಭೆ ನಡೆಸಿ ಮಾಹಿತಿ ನೀಡಿದರು.


ಭಾರತ ಸಂವಿಧಾನದ ಪೀಠಿಕೆಯನ್ನು ಸೆ.೧೫ ರಂದು ಬೆಳಗ್ಗೆ ೧೦ ಗಂಟೆಗೆ ಪ್ರತಿಯೊಬ್ಬರೂ ಓದುವ ಮೂಲಕ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನಾಗಿ ಆಚರಿಸಲು ಸರ್ಕಾರ ನಿರ್ಧರಿಸಿದೆ. ಆ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ಕೈಜೋಡಿಸುವಂತೆ ಮನವಿ ಮಾಡಿದರು.


ಈ ಅವಕಾಶವನ್ನು ಎಲ್ಲರೂ ಉಪಯೋಗಿಸಿಕೊಳ್ಳಬೇಕು. ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಅಲ್ಲದೆ ಸೆ.೧೫ ರಂದು ಬೆಳಗ್ಗೆ ೧೦ ಗಂಟೆಗೆ ಸಂವಿಧಾನದ ಪೀಠಿಕೆಯನ್ನು ಓದಿ, ಅದನ್ನು ಪ್ರತಿಜ್ಞಾ ವಿಧಿಯಂತೆ ಸ್ವೀಕರಿಸಬೇಕು. ಅದರ ಫೋಟೋವನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಿಕೊಂಡಲ್ಲಿ, ಎಲ್ಲರಿಗೂ ಸೆ.೧೫ರ ಬಳಿಕ ಆನ್‌ಲೈನ್‌ನಲ್ಲಿ ವೆಬ್‌ಸೈಟ್ ಮೂಲಕವೇ ಪ್ರಮಾಣಪತ್ರ ದೊರೆಯಲಿದೆ ಎಂದರು.


ನೋಂದಣಿ ಹೇಗೆ: ಸಂವಿಧಾನದ ಪೀಠಿಕೆ ಓದಲು ಆನ್‌ಲೈನ್ ನೋಂದಣಿ ಪ್ರಕ್ರಿಯೆ ಅತ್ಯಂತ ಸರಳವಾಗಿದೆ. ಸಮಾಜ ಕಲ್ಯಾಣ ಇಲಾಖೆ ರೂಪಿಸಿರುವ ವೆಬ್‌ಸೈಟ್ https://thepreamble-swdkar.in ನಲ್ಲಿ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ, ಇಮೇಲ್ ವಿಳಾಸ, ಮುಂತಾದ ವಿವರ ನೀಡಿ ನೋಂದಣಿ ಮಾಡಿಕೊಳ್ಳಬೇಕು. ಒಟ್ಟು ೧೦ ವಿಭಾಗಗಳನ್ನು ವೆಬ್‌ಸೈಟ್‌ನಲ್ಲಿ ಮಾಡಿದೆ. ೧೦ ಸದಸ್ಯರ ಗುಂಪು ಒಳಗೊಂಡು ನೋಂದಣಿ ಮಾಡಬೇಕು ಎಂದು ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಶೇಖರ್ ಮಾಹಿತಿ ನೀಡಿದರು.


ವಿಡಿಯೊ ಸಂವಾದದಲ್ಲಿ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net