

ಲಕ್ಷೆ್ಮೕಶ್ವರ: ಹುಬ್ಬಳ್ಳಿ ರೌಂಡ್ ಟೇಬಲ್ 35 ಹಾಗೂ ಹುಬ್ಬಳ್ಳಿ ಲೇಡಿಸ್ ಸರ್ಕಲ್ 45 ಅವರ ಸಹಯೋಗದಲ್ಲಿ ಪಟ್ಟಣದ ಅರಳು ವಿಶೇಷ ಅಗತ್ಯತೆಯುಳ್ಳ ಬುದ್ಧಿಮಾಂದ್ಯ ವಸತಿ ರಹಿತ ಶಾಲಾ ಮಕ್ಕಳಿಗೆ ಶನಿವಾರ ಉಚಿತ ವಿಶೇಷ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಲಾಗಿತ್ತು.
ಮಕ್ಕಳ ನರರೋಗ ತಜ್ಞ ಡಾ. ರಾಘವೇಂದ್ರ ಅಮೋಘಿಮಠ ಮಾತನಾಡಿ, ಮಗುವಿನ ಜನನದ ನಂತರ ಅವುಗಳಿಗೆ ಇರುವ ಸಣ್ಣ ಪುಟ್ಟ ದೋಷಗಳನ್ನು ನಿವಾರಿಸುವ ನಿಟ್ಟಿನಲ್ಲಿ ತಜ್ಞ ವೈದ್ಯರನ್ನು ಭೇಟಿ ಮಾಡಿ ಆರಂಭದ ಹಂತದಲ್ಲಿಯೇ ನಿಯಂತ್ರಿಸಬಹುದಾಗಿದೆ. ನರಗಳ ಸರಿಯಾದ ಬೆಳವಣಿಗೆಯಾಗದೆ ಇರುವ ಹಿನ್ನಲೆಯಲ್ಲಿ ಬುದ್ದಿಮಾಂದ್ಯತೆ ಉಂಟಾಗಬಹುದಾಗಿದೆ. ಸರಿಯಾದ ಚಿಕಿತ್ಸೆ ದೊರೆತಲ್ಲಿ ಮಕ್ಕಳಲ್ಲಿ ಸುಧಾರಣೆ ಕಾಣಬಹುದು. ಬುದ್ಧಿಮಾಂದ್ಯ ಮಕ್ಕಳಲ್ಲಿರುವ ಸಮಸ್ಯೆಗಳನ್ನು ಅರಿತು ಆರೈಕೆ ನೀಡಿದರೆ ಹಂತ ಹಂತವಾಗಿ ಸುಧಾರಣೆ ಕಾಣಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಮುಖ್ಯಾಧಾಪಕಿ ನೀಲಮ್ಮ ದಾಸಪ್ಪನವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಬಿರದಲ್ಲಿ ದಂತ ವೈದ್ಯರಾದ ಡಾ. ಜೆನ್ಸಿ, ಡಾ. ಅರ್ಚನಾ, ಕಿಶನ್ ಅಭಿದ್, ಲಿಂಗರಾಜ ಪುಟ್ಟಣ್ಣವರ, ವಿಶೇಷ ಶಿಕ್ಷಕರಾದ ಲಲಿತಾ ದಾಸಪ್ಪನವರ, ಪ್ರಶಾಂತ ಎಸ್.ಬಿ., ಅಕ್ಕಮ್ಮ ಕೊರದಾಳ, ಹೇಮಾವತಿ ಅಣ್ಣಿಗೇರಿ, ಇತರರಿದ್ದರು. 57 ವಿಶೇಷ ಮಕ್ಕಳು ಹಾಗೂ ಪಾಲಕರು ಶಿಬಿರದ ಲಾಭ ಪಡೆದುಕೊಂಡರು.