

ಚಿಕ್ಕಮಗಳೂರು: ಮೇನಲ್ಲಿ ರಸ್ತೆ ಸಾರಿಗೆ ನಿಗಮದ ನೌಕರರ ವೇತನ ಪರಿಷ್ಕರಿಸುವ ಕುರಿತು ರಾಜ್ಯ ಸರ್ಕಾರ ಭರವಸೆ ನೀಡಿರುವುದರಿಂದ ನೌಕರರು ಯಾವುದೇ ರೀತಿಯ ಮುಷ್ಕರ ಕೈಗೊಳ್ಳಬಾರದು ಎಂದು ಕೆಎಸ್‍ಆರ್‍ಟಿಸಿ ಅಧ್ಯಕ್ಷ ಚಂದ್ರಪ್ಪ ಕೋರಿದರು. ಕರೊನಾ ಸಂಕಷ್ಟದ ಸಂದರ್ಭದಲ್ಲಿ ಕೂಡ ನೌಕರರಿಗೆ ಅನುಕೂಲ ಮಾಡಲಾಗಿದೆ. ಪ್ರಸ್ತುತ ರಾಜ್ಯದ ಮೂರು ಕಡೆಗಳಲ್ಲಿ ಉಪ ಚುನಾವಣೆ ನಡೆಯುತ್ತಿರುವುದರಿಂದ ಮೇ 4ರ ಬಳಿಕ ವೇತನ ಪರಿಷ್ಕರಣೆ ಮಾಡುವುದಾಗಿ ಮುಖ್ಯಮಂತ್ರಿ ವಾಗ್ದಾನ ನೀಡಿದ್ದಾರೆ ಎಂದು ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು.
ಎಂಟು ಬೇಡಿಕೆ ಈಡೇರಿಕೆ:
ಡಿಸೆಂಬರ್ ನಲ್ಲಿ ನೌಕರರು ಮುಷ್ಕರ ನಡೆಸಿದ ಸಂದರ್ಭ 9 ರಲ್ಲಿ 8 ಬೇಡಿಕೆಗಳನ್ನು ಸರ್ಕಾರ ಈಡೇರಿಸಿದೆ. ಆರನೇ ವೇತನ ಆಯೋಗದ ವರದಿ ಜಾರಿಗೆ ತರಬೇಕು ಎನ್ನುವುದು ಅವರ ಪ್ರಬಲ ಬೇಡಿಕೆ. ಈ ಕುರಿತು ಮುಖ್ಯಮಂತ್ರಿ ಜತೆ ಸಾರಿಗೆ ಸಚಿವ ಲಕ್ಷ್ಮಣ ಸವದಿ ಮತ್ತು ನಾನು ಸಮಾಲೋಚಿಸಿರುವುದಾಗಿ ತಿಳಿಸಿದರು. ಕರೊನಾ ಕಾರಣಕ್ಕೆ ನಿಗಮದ ಎಲ್ಲ ವಿಭಾಗಗಳೂ ನಷ್ಟಕ್ಕೆ ಒಳಗಾಗಿವೆ. 2020ರಲ್ಲಿ ಚಿಕ್ಕಮಗಳೂರು ವಿಭಾಗವೊಂದರಲ್ಲೇ 43.76 ಕೋಟಿ ರೂ. ನಷ್ಟ ಸಂಭವಿಸಿದೆ. 2021ರ ವೇಳೆಗೆ ಈ ನಷ್ಟ 64 ಕೋಟಿ ರೂ.ಗೆ ಏರಿದೆ. ಇಡೀ ರಾಜ್ಯದ ಎಲ್ಲ ವಿಭಾಗಗಳಿಂದ 3,200 ಕೋಟಿ ರೂ. ನಷ್ಟವಾಗಿರುವುದಾಗಿ ತಿಳಿಸಿದರು.
ಜನರ ಹಿತದೃಷ್ಟಿಯಿಂದ ಬಸ್ ಸೇವೆ:
ಕಳೆದ ವರ್ಷ 218 ಕೋಟಿ ರೂ. ಆದಾಯ ಗಳಿಸಿದ್ದರೆ, 268 ಕೋಟಿ ರೂ. ನಷ್ಟ ಸಂಭವಿಸಿದೆ. 2021ರಲ್ಲಿ 117 ಕೋಟಿ ರೂ. ಆದಾಯ ಬಂದಿದ್ದರೆ 180 ಕೋಟಿ ರೂ. ನಷ್ಟ ಉಂಟಾಗಿದೆ. ಇಷ್ಟಾಗಿಯೂ ಸಾರ್ವಜನಿಕ ಹಿತದೃಷ್ಟಿಯಿಂದ ಬಸ್‍ಗಳನ್ನು ಓಡಿಸುತ್ತಿದ್ದು, ಅಷ್ಟಕ್ಕೂ ಇದು ಲಾಭದ ಸಂಸ್ಥೆಯಲ್ಲ. ಸಾರ್ವಜನಿಕ ಸೇವೆಗಿರುವುದು ಎಂದರು. ಕರೊನಾ ಸೋಂಕಿನಿಂದಾಗಿ ಸಾಮಾನ್ಯ ಜನರು ಬಸ್ ಹತ್ತಲು ಹಿಂದೇಟು ಹಾಕುತ್ತಿದ್ದಾರೆ. ಸುಮಾರು 5 ಲಕ್ಷ ಜನ ಮಧ್ಯಮ ವರ್ಗದವರು ಕರೊನಾಗೆ ಹೆದರಿ ಸ್ವಂತ ವಾಹನ ಖರೀದಿಸಿದ್ದಾರೆ. ಇದೂ ನಷ್ಟಕ್ಕೆ ಕಾರಣವಾಗಿದೆ ಎಂದರು. ಕರೊನಾದಿಂದಾಗಿ ಕಳೆದ ವರ್ಷ 3200 ಕೋಟಿ ರೂ. ನಷ್ಟ ಸಂಭವಿಸಿದರೂ 1780 ಕೋಟಿ ರೂ. ನೌಕರರ ವೇತನಕ್ಕೆ ಸರ್ಕಾರ ಒದಗಿಸಿದೆ. ಕೆಎಸ್‍ಆರ್‍ಟಿಸಿಯಲ್ಲಿ ಅತ್ಯುತ್ತಮ ಚಾಲಕ, ನಿರ್ವಾಹಕರಿದ್ದಾರೆ. ಸಂಸ್ಥೆ ಉಳಿದರೆ ಮಾತ್ರ ಎಲ್ಲರಿಗೂ ಅನುಕೂಲವಾಗುತ್ತದೆ ಎಂದು ಚಂದ್ರಪ್ಪ ಹೇಳಿದರು.
ಸಂಘಟನೆಗಳು ದಿಕ್ಕು ತಪ್ಪಿಸುತ್ತಿವೆ:
ಚಿಕ್ಕಮಗಳೂರು ವಿಭಾಗದಲ್ಲಿ 3074 ಚಾಲಕ ನಿರ್ವಾಹಕ ಮತ್ತಿತರ ನೌಕರ ವರ್ಗವಿದೆ. ಒಟ್ಟಾರೆ ಸಂಸ್ಥೆಯಲ್ಲಿ ಒಟ್ಟು 1.30 ಲಕ್ಷ ನೌಕರ, ಸಿಬ್ಬಂದಿ ಇದ್ದು ಒಟ್ಟು ಇರುವ 30 ಸಾವಿರ ಬಸ್‍ಗಳಲ್ಲಿ 22 ಸಾವಿರ ಬಸ್‍ಗಳನ್ನು ಮಾತ್ರ ಸಂಚಾರಕ್ಕೆ ಬಿಡಲಾಗುತ್ತಿದೆ. ಕರೊನಾ ಕಾರಣಕ್ಕೆ 8 ಸಾವಿರ ವೋಲ್ವೋ ಮತ್ತು ಎಸಿ ಬಸ್‍ಗಳನ್ನು ಓಡಿಸಲಾಗುತ್ತಿಲ್ಲ. ಆದರೂ ನೌಕರರಿಗೆ ಅನ್ಯಾಯ ಆಗಬಾರದು ಎನ್ನುವ ಉದ್ದೇಶ ಸರ್ಕಾರದ್ದು ಎಂದರು. ಚಾಲಕ, ನಿರ್ವಾಹಕರನ್ನು ಕೆಲವು ಸಂಘಟನೆಗಳು ದಿಕ್ಕು ತಪ್ಪಿಸುತ್ತಿವೆ. 6ನೇ ವೇತನ ಆಯೋಗದ ವಿಚಾರ ನೌಕರರ ತಲೆಗೆ ತುಂಬಿದ್ದಾರೆ. 2005 ರಿಂದೀಚೆಗೆ ಯಾವುದೇ ಸರ್ಕಾರಿ ನೇಮಕಾತಿಗಳಿಗೆ ಪೆನ್ಷನ್ ಇರುವುದಿಲ್ಲ. ಆದರೂ ವೇತನ ಆಯೋಗದ ವರದಿ ಜಾರಿಯಾಗಬೇಕು ಎನ್ನುತ್ತಿರುವುದೇಕೆ ಎಂದು ಗೊತ್ತಾಗುತ್ತಿಲ್ಲ ಎಂದರು.
ಕಟ್ಟಡ ಕಾರ್ಮಿಕರಿಗೆ ಉಚಿತ ಬಸ್ ಪಾಸ್:
ಕಟ್ಟಡ ಕಾರ್ಮಿಕರಿಗೆ ಉಚಿತ ಬಸ್‍ಪಾಸ್ ನೀಡಲು ಉದ್ದೇಶಿಸಲಾಗಿದೆ. ವಿದ್ಯಾರ್ಥಿ ಬಸ್‍ಪಾಸ್‍ಗೆ ಸಂಬಂಧಿಸಿದ 2800 ಕೋಟಿ ರೂ. ಸರ್ಕಾರ ಭರಿಸುತ್ತಿದ್ದು, ಈ ಬಾರಿ ಇನ್ನೂ 850 ಕೋಟಿ ರೂ. ನಿಗಮಕ್ಕೆ ಪಾವತಿಯಾಗಬೇಕಿದೆ. ಹೀಗಿದ್ದರೂ ಸಾರ್ವಜನಿಕರಿಗೆ ತೊಂದರೆ ಆಗಬಾರದು ಎನ್ನುವ ಕಾರಣಕ್ಕೆ ಬಸ್ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ನೌಕರರು ಸಹ ಪರಿಸ್ಥಿತಿಗನುಗುಣವಾಗಿ ಬೇಡಿಕೆಗಳನ್ನು ಇಡಬೇಕು ಎಂದು ಅವರು ಹೇಳಿದರು.
ಮುಷ್ಕರ ಕೈಬಿಡಲು ಮನವಿ:
ಕೆಎಸ್‍ಆರ್‍ಟಿಸಿ ನೌಕರರು ಮುಷ್ಕರ ಕೈಗೊಳ್ಳಬಾರದು ಎಂದು ಕೋರುತ್ತೇವೆ. ಅದನ್ನು ಮೀರಿ ಮುಷ್ಕರ ನಡೆಸಿದರೆ ಪರ್ಯಾಯ ಕ್ರಮಗಳನ್ನು ಸರ್ಕಾರ ಕೈಗೊಳ್ಳಲಿದ್ದು, ಸಹಕಾರ ನೀಡಲು ಮುಂದೆ ಬಂದಿರುವ ಖಾಸಗಿ ಸಂಸ್ಥೆಯನ್ನು ಬಳಸಿಕೊಳ್ಳಲಾಗುವುದು. ಆರ್‍ಟಿಒ ಮತ್ತು ಪೊಲೀಸ್ ಇಲಾಖೆ ನೆರವಿನಲ್ಲಿ ಸಾರ್ವಜನಿಕರಿಗೆ ಬಸ್ ಸೇವೆ ನೀಡಲಾಗುತ್ತದೆ ಎಂದು ಹೇಳಿದರು. ವಿಭಾಗೀಯ ನಿಯಂತ್ರಣಾಧಿಕಾರಿ ಎಚ್.ಟಿ.ವೀರೇಶ್, ರಾಜಶೇಖರ್ ಇದ್ದರು.