ಬಜೆಟ್‌ಗೆ ದೊಡ್ಡದೊಡ್ಡ ಬೇಡಿಕೆ ; ಸಚಿವ ಮಾಧುಸ್ವಾಮಿ ಸಮ್ಮುಖದಲ್ಲಿ ಅನುಮೋದನೆ

25 TMK Madhuswamy meeting
Published on

ತುಮಕೂರು: ರಾಜ್ಯ ಬಜೆಟ್‌ಗೆ ದಿನಗಣನೆ ಆರಂಭವಾಗಿದ್ದು, ಜಿಲ್ಲೆಯಿಂದ ವಿವಿಧ ಇಲಾಖೆಗಳಿಂದ ದೊಡ್ಡದೊಡ್ಡ ಬೇಡಿಕೆಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅಧ್ಯಕ್ಷತೆಯಲ್ಲಿ ಜಿಪಂ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಜಿಲ್ಲಾ ಯೋಜನಾ ಸಮಿತಿ ಸಭೆಯಲ್ಲಿ ಅನುಮೋದಿಸಿ ಕಳುಹಿಸಲಾಯಿತು.

ಈ ವರ್ಷ ಕೊಟ್ಟಿದ್ದ ಅನುದಾನವನ್ನು ಸಂಪೂರ್ಣವಾಗಿ ಬಳಸಿಕೊಳ್ಳದೆ ಬೇಡಿಕೆ ಹೆಚ್ಚು ನೀಡಿದ್ದ ಇಲಾಖೆ ಮುಖ್ಯಸ್ಥರಿಗೆ ಸಚಿವ ಜೆ.ಸಿ.ಮಾಧುಸ್ವಾಮಿ ಚಳಿ ಬಿಡಿಸಿದರು.

ಸಚಿವರ ಕೆಲವು ಸಲಹೆಗಳನ್ನು ಸೇರಿಸಿಕೊಂಡು ವಿವಿಧ ಕಾರ್ಯಕ್ರಮಗಳ ಅನುಷ್ಠಾನ ಸೇರಿ ಜಿಲ್ಲೆಯಲ್ಲಿ 34 ಇಲಾಖೆಗಳ ಮೂಲಕ ಕೈಗೊಳ್ಳಲಿರುವ ಪ್ರಸ್ತಾಪಿತ ಕಾರ್ಯಕ್ರಮ, ಯೋಜನೆಗಳಿಗೆ ಅಗತ್ಯವಿರುವ 395504.50 ಲಕ್ಷ ರೂಪಾಯಿ ಅನುದಾನದ ಕ್ರಿಯಾಯೋಜನೆಗೆ ಜಿಲ್ಲಾ ಯೋಜನಾ ಸಮಿತಿ ಒಪ್ಪಿಗೆ ನೀಡಿತು. ಜಿಲ್ಲೆಯ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಆಯಾ ಇಲಾಖೆಗಳ ಮೂಲಕ ಜಿಲ್ಲೆಯಲ್ಲಿ ಮುಂದಿನ ಆರ್ಥಿಕ ವರ್ಷದಲ್ಲಿ ಕೈಗೊಳ್ಳಬೇಕಾಗಿರುವ ಕಾರ್ಯಕ್ರಮ ಹಾಗೂ ಕೈಗೊಂಡಿರುವ ಯೋಜನೆಗಳ ಸಂಪೂರ್ಣ ಅನುಷ್ಠಾನಕ್ಕಾಗಿ ಅಗತ್ಯವಿರುವ ಅನುದಾನಗಳ ಬಗ್ಗೆ ಮಾಹಿತಿ ನೀಡಿದರು.

ಕೃಷಿ, ತೋಟಗಾರಿಕೆ ಇಲಾಖೆಯಲ್ಲಿ ಕೇಂದ್ರ ಸರ್ಕಾರದಿಂದ ಬರುವ ಹಣವನ್ನೇ ಸಂಪೂರ್ಣ ಖರ್ಚು ಮಾಡಿಲ್ಲ, ಈಗ ಹೆಚ್ಚು ಹಣ ಕೇಳಿದ್ದೀರ, ಏಕೆ ಖರ್ಚಾಗಿಲ್ಲ ಎಂಬುದನ್ನಾದರೂ ಹೇಳಿ ಎಂದು ಅಧಿಕಾರಿಗಳಿಗೆ ತಿಳಿಸಿದರು. 2020-21ನೇ ಸಾಲಿಗೆ ಹೆಚ್ಚುವರಿಯಾಗಿ ಕೃಷಿ, ತೋಟಗಾರಿಕೆ, ಸಮಾಜ ಕಲ್ಯಾಣ, ಪಶುಪಾಲನೆ ಸೇರಿ ವಿವಿಧ 27 ಇಲಾಖೆಗಳ 115027.72 ಲಕ್ಷ ರೂ. ಪ್ರಸ್ತಾಪಿತ ಅನುದಾನಕ್ಕೆ ಸಮಿತಿಯಲ್ಲಿ ಚರ್ಚಿಸಿ ಒಪ್ಪಿಗೆ ಸೂಚಿಸಲಾಯಿತು. ಅಟಲ್ ಭೂಜಲ್ ಯೋಜನೆಯಡಿ ಜಿಲ್ಲೆಯ ಚಿಕ್ಕನಾಯಕನಹಳ್ಳಿ, ಮಧುಗಿರಿ, ಕೊರಟಗೆರೆ, ಶಿರಾ ಸೇರಿ 6 ತಾಲೂಕುಗಳು ಆಯ್ಕೆಯಾಗಿದ್ದು, ಈ ಬಗ್ಗೆ ಸಮನ್ವಯ ಇಲಾಖೆಯ ಅಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯರಿಗೆ ತಾಲೂಕುವಾರು ತರಬೇತಿ ನೀಡಬೇಕಾಗಿದ್ದು ಸಮಯ ನಿಗದಿಪಡಿಸಿಕೊಳ್ಳಿ ಎಂದು ಸೂಚಿಸಿದರು.

ಶಾಸಕ ಮಸಾಲೆ ಜಯರಾಮ್, ವಿಧಾನಪರಿಷತ್ ತಿಪ್ಪೇಸ್ವಾಮಿ, ಜಿಪಂ ಅಧ್ಯಕ್ಷೆ ಲತಾ, ಉಪಾಧ್ಯಕ್ಷೆ ಶಾರದಾ, ಜಿಲ್ಲಾಧಿಕಾರಿ ಡಾ.ರಾಕೇಶ್‌ಕುಮಾರ್, ಸಿಇಒ ಶುಭಾಕಲ್ಯಾಣ್, ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಕೋನ ವಂಶಿಕೃಷ್ಣ, ಪಾಲಿಕೆ ಆಯುಕ್ತ ಭೂಬಾಲನ್ ಇದ್ದರು.

ರೈತರ ತಂಟೆಗೆ ಹೋಗಬೇಡಿ : ಸಾಕಷ್ಟು ವರ್ಷದಿಂದ ಉಳುಮೆ ಮಾಡಿಕೊಂಡು, ಸಾಗುವಳಿ ಚೀಟಿಗೆ ಅರ್ಜಿ ಹಾಕಿ ಕಾದಿರುವ ರೈತರ ಜಮೀನುಗಳಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ. ರೈತರ ಜಮೀನಿಗೆ ಕಾಲುವೆ ಹೊಡೆಯುತ್ತಿದ್ದಾರೆ ಎಂದು ಸಭೆಯಲ್ಲಿ ಹಾಜರಿದ್ದ ಜಿಪಂ ಸದಸ್ಯರು ಸಚಿವರ ಗಮನ ಸೆಳೆದರು. ಮೀಸಲು ಅರಣ್ಯದಲ್ಲಿ ಹೇಗಾದರೂ ಮಾಡಿಕೊಳ್ಳಿ ಆದರೆ, ಸಾಮಾಜಿಕ ಹಾಗೂ ಡೀಮ್ಡ್ ಫಾರೆಸ್ಟ್ ಪ್ರದೇಶದ ಬಗ್ಗೆ ಬಗರ್‌ಹುಕುಂ ಸಮಿತಿ ತೀರ್ಮಾನಿಸುವವರೆಗೂ ಸುಮ್ಮನಿರಿ ಎಂದು ಮಾಧುಸ್ವಾಮಿ ಸೂಚಿಸಿದರು.

ಸರ್ಕಾರದಿಂದ ಬರುವ ಹಣ ಖರ್ಚು ಮಾಡುವುದನ್ನು ಅಧಿಕಾರಿಗಳು ಅಭ್ಯಾಸ ಮಾಡಿಕೊಳ್ಳಬೇಕು, ವರ್ಷ ಪೂರ್ತಿ ಸುಮ್ಮನಿದ್ದು, ಫೆಬ್ರವರಿ, ಮಾರ್ಚ್‌ಗೆ ತರಾತುರಿಯಲ್ಲಿ ಮಾಡುವುದು ಸಹಿಸಲು ಸಾಧ್ಯವಿಲ್ಲ. ಹಣ ಖರ್ಚು ಮಾಡಿದರೆ ಮತ್ತಷ್ಟು ಅನುದಾನ ಕೇಳಲು ನಮಗೂ ಧೈರ್ಯ ಬರುತ್ತದೆ. ಜೆ.ಸಿ.ಮಾಧುಸ್ವಾಮಿ ಜಿಲ್ಲಾ ಉಸ್ತುವಾರಿ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net