ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯ: ಕಬ್ಬು ಬೆಳೆಗಾರರ ಸಂಘದಿಂದ ಡಿಸಿಗೆ ಮನವಿ ಸಲ್ಲಿಕೆ

mysore
Published on

ಮೈಸೂರು: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ವತಿಯಿಂದ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಅವರಿಗೆ ಸೋಮವಾರ ಮನವಿ ಸಲ್ಲಿಸಲಾಯಿತು.


ಮೈಸೂರು, ಚಾಮರಾಜನಗರ ಜಿಲ್ಲಾ ವ್ಯಾಪ್ತಿಯಲ್ಲಿ ಕಳೆದ ವರ್ಷದ ಕಬ್ಬು ಬಾಕಿ ಸುಮಾರು 25 ಕೋಟಿ ರೂ.ಇದೆ. ಜತೆಗೆ, ಪ್ರತಿ ಟನ್‌ಗೆ 150 ರೂ. ಕೊಡಲು ಸರ್ಕಾರ ಆದೇಶವಿದ್ದರೂ ರೈತರಿಗೆ ಹಣ ನೀಡದೆ ಸಕ್ಕರೆ ಕಾರ್ಖಾನೆಗಳು ಮೋಸ ಮಾಡಿವೆ. ಕಾಯ್ದೆಯ ಪ್ರಕಾರ ಲಾಭಾಂಶದಲ್ಲಿ ಹೆಚ್ಚುವರಿ ಬಾಕಿಯನ್ನೂ ಕೊಟ್ಟಿಲ್ಲ. ಈ ಬಾಕಿಯನ್ನು ಕೊಡಿಸಲು ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.


ಹೊಸ ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ಪಡೆಯಲು ಇದ್ದಂತಹ ಅಕ್ರಮ-ಸಕ್ರಮ ಯೋಜನೆಯನ್ನು ಸರ್ಕಾರ ಮತ್ತೆ ಜಾರಿಗೆ ತರಬೇಕು. ಗ್ರಾಮೀಣ ಭಾಗದ ಜನರಿಗೆ ಕುಡಿಯುವ ನೀರು, ದನಕರುಗಳಿಗೆ ಗೋ ಶಾಲೆ, ಮೇವು ಬ್ಯಾಂಕ್‌ಗಳನ್ನು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಆರಂಭಿಸಬೇಕು ಎಂದು ಒತ್ತಾಯಿಸಿದರು.


ಕಾಡಂಚಿನ ಪ್ರದೇಶದ ರೈತರಿಗೆ ಕಾಡುಪ್ರಾಣಿಗಳ ಹಾವಳಿಯಿಂದ ಉಂಟಾಗುವ ಬೆಳೆ ನಷ್ಟಕ್ಕೆ ವೈಜ್ಞಾನಿಕವಾಗಿ ಪರಿಹಾರ ನೀಡಬೇಕು. ಬರಗಾಲದಲ್ಲಿ ಬ್ಯಾಂಕ್‌ಗಳು ಸಾಲ ವಸೂಲಾತಿಗೆ ನೋಟಿಸ್ ನೀಡುತ್ತಿವೆ. ಹೊಸ ಸಾಲ ನೀಡುವಲ್ಲಿ ವಿಳಂಬ ಮಾಡುತ್ತಿವೆ. ಇದನ್ನು ತಪ್ಪಿಸಬೇಕು. ಕಳೆದ ಸಾಲಿನಲ್ಲಿ ರೈತರ ಬೆಳೆ ವಿಮೆ ಬಾಕಿ ನಷ್ಟ ಪರಿಹಾರವನ್ನು ವೈಜ್ಞಾನಿಕವಾಗಿ ಕೊಡಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.


ರೈತರ ಜೀವನಾಡಿಯಾದ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್‌ಗೆ ರೂ.10 ಹೆಚ್ಚುವರಿ ಪ್ರೋತ್ಸಾಹ ಧನ ಕೊಡಿಸಬೇಕು. ಕಬಿನಿ ಕಾವೇರಿ ವ್ಯಾಪ್ತಿಯ ನಾಲೆಗಳ ಮುಖಾಂತರ ಅಂತರ್ಜಲ ವೃದ್ಧಿ ಕ್ರಮ, ಜನ-ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ಮತ್ತು ಕೆರೆಕಟ್ಟೆಗೆ ತುಂಬಿಸಲು ನೀರು ಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.


ಸಂಘದ ಅಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್, ಉಪಾಧ್ಯಕ್ಷ ಕೆರೆಹುಂಡಿ ರಾಜಣ್ಣ, ಜಿಲ್ಲಾಧ್ಯಕ್ಷ ಹಾಡ್ಯರವಿ, ನಗರಾಧ್ಯಕ್ಷ ದೇವೇಂದ್ರ ಕುಮಾರ್, ಮುಖಂಡರಾದ ಶಿವರುದ್ರಪ್ಪ, ಮುದ್ದಹಳ್ಳಿ ಚಿಕ್ಕಸ್ವಾಮಿ, ಕಸವನ್ನಹಳ್ಳಿ ಮಂಜೇಶ್, ಶಿವಣ್ಣ, ರಾಹುಲ್, ದಿನೇಶ್ ಹಾಜರಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net