

ಶಿವಮೊಗ್ಗ: ಕಾಮಗಾರಿ ಪೂರ್ಣಗೊಂಡ ಬಳಿಕ ಎಫ್‌ಡಿ ಹಣ ಹಿಂದಿರುಗಿಸಲು ಗುತ್ತಿಗೆದಾರನ 40 ಸಾವಿರ ರೂ.ಗೆ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆನಂದಪುರ ಇರುವಕ್ಕಿಯ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಎಇಇ ಲೋಹಿತ್ ಪ್ರಶಾಂತ್‌ಕುಮಾರ್ ಮತ್ತು ಅಕೌಂಟ್ ಅಸಿಸ್ಟೆಂಟ್ ಜಿ.ಆರ್.ಗಿರೀಶ್ ಸೋಮವಾರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ವಿದ್ಯಾನಗರದ ಕ್ಲಾಸ್-1 ಗುತ್ತಿಗೆದಾರ ಸುನೀಲ್ ಎಂಬುವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದು ಕರ್ನಾಟಕ ಲೋಕಾಯುಕ್ತ ಶಿವಮೊಗ್ಗ ಕಚೇರಿ ಪೊಲೀಸ್ ಅಧೀಕ್ಷಕ ಎಂ.ಎಚ್.ಮಂಜುನಾಥ ಚೌಧರಿ ಹಾಗೂ ಡಿವೈಎಸ್ಪಿ ಉಮೇಶ್ ಈಶ್ವರನಾಯ್ಕ ಮಾರ್ಗದರ್ಶನದಲ್ಲಿ ದಾಳಿ ಸಿಬ್ಬಂದಿ ದಾಳಿ ನಡೆಸಿ 30 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದಾಗ ರೆಡ್‌ಹ್ಯಾಂಡ್ ಆಗಿ ಇಬ್ಬರನ್ನು ಹಿಡಿದಿದ್ದಾರೆ.
ಶಿವಮೊಗ್ಗ ಲೋಕಾಯುಕ್ತ ಕಚೇರಿಯ ಇನ್‌ಸ್ಪೆಕ್ಟೆರ್‌ಗಳಾದ ಪ್ರಕಾಶ್, ವೀರಬಸಪ್ಪ ಎಲ್ ಕುಸಲಾಪುರ, ಸಿಬ್ಬಂದಿಗಳಾದ ಯೋಗೇಶ್, ವಿ.ಎ.ಮಹಂತೇಶ್, ಎಚ್.ಜಿ.ಸುರೇಂದ್ರ, ಬಿ.ಟಿ.ಚನ್ನೇಶ, ಪ್ರಶಾಂತ್‌ಕುಮಾರ್, ರಘುನಾಯ್ಕ, ಅರುಣ್‌ಕುಮಾರ್, ಪುಟ್ಟಮ್ಮ ಪ್ರದೀಪ್, ವಿ.ಗೋಪಿ, ಜಯಂತ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಏನಿದು ಪ್ರಕರಣ ?
ಕೃಷಿ ಮತ್ತು ತೋಟಗಾರಿಕೆ ವಿವಿಯಿಂದ ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ಕೆವಿಕೆ ಬಬ್ಬೂರ್ ಫಾರ್ಮ್ ಆಡಳಿತ ವಿಭಾಗದ ಕಚೇರಿ ಮೇಲ್ಛಾವಣಿ ನಿರ್ಮಾಣಕ್ಕೆ 4,23,276 ರೂ.ಗೆ ಟೆಂಡರ್ ಕರೆದಿದ್ದು, ಗುತ್ತಿಗೆದಾರ ಸುನೀಲ್ 3,59,331 ರೂ.ಗೆ ಗುತ್ತಿಗೆ ಪಡೆದಿದ್ದರು. ಜ.11ರಂದು ಕ್ರೀಯಾಯೋಜನೆ ಪಡೆದಿದ್ದು ಫೆ.19ರಿಂದ ಮಾ.4ರೊಳಗೆ ಕಾಮಗಾರಿ ಮುಕ್ತಾಯಗೊಳಿಸಿದ್ದರು.
ಮಾ.4ರಂದು ಕಾಮಗಾರಿ ವೀಕ್ಷಣೆಗೆ ಬಂದಿದ್ದ ಎಇಇ ಲೋಹಿತ್ ಪ್ರಶಾಂತ್‌ಕುಮಾರ್ 40 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದು. ಆನಂತರ ಕಾಮಗಾರಿಗೆ ಸಂಬಂಧಿಸಿದ ಬಿಲ್ ಪಾವತಿಯಾಗಿತ್ತು. ಆದರೆ ಕಾಮಗಾರಿಗೆ ಸಂಬಂಧಿಸಿದ ವ್ಯತ್ಯಾಸ ಮೊತ್ತದ ಎಫ್‌ಡಿ 63,946 ರೂ. ಅನ್ನು ಸುನೀಲ್ ಅವರಿಗೆ ಹಿಂದಿರುಗಿಸಬೇಕಿತ್ತು. ಎಫ್‌ಡಿ ಹಣ ಹಿಂದಿರುಗಿಸುವಂತೆ ಸುನೀಲ್ ಮಾ.28ರಂದು ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿವಿಗೆ ತೆರಳಿ ಮನವಿ ಪತ್ರ ಸಲ್ಲಿಸಿದ್ದರು. ಆನಂತರ ಹಣ ಹಿಂದಿರುಗದ ಕಾರಣ ಏ.13ರಂದು ಬೆಳಗ್ಗೆ 11.30ಕ್ಕೆ ಇರುವಕ್ಕಿಗೆ ತೆರಳಿ ಎಇಇ ಲೋಹಿತ್ ಅವರನ್ನು ಭೇಟಿ ಮಾಡಿದಾಗ ತನಗೆ ಕೊಡಬೇಕಾದ ಹಣವನ್ನು ಅಕೌಂಟೆಂಟ್ ಗಿರೀಶ್ ಬಳಿ ತಲುಪಿಸು. ಆನಂತರ ಎಫ್‌ಡಿ ಬಿಡುಗಡೆ ಮಾಡುವುದಾಗಿ ಹೇಳಿದ್ದರು. ಅದನ್ನು ಸುನೀಲ್ ಅವರು ಮೊಬೈಲ್‌ನಲ್ಲಿ ವಾಯ್ಸ್ ರೆಕಾರ್ಡ್ ಮಾಡಿಕೊಂಡಿಕೊಂಡು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಈ ಬಗ್ಗೆ ಕಾರ್ಯಪ್ರವೃತ್ತರಾದ ಲೋಕಾಯುಕ್ತ ಪೊಲೀಸರು 30 ಸಾವಿರ ರೂ. ಲಂಚ ಸ್ವೀಕರಿಸುವಾಗ ದಾಳಿ ಮಾಡಿ ಇಬ್ಬರನ್ನೂ ಬಂಧಿಸಿದ್ದಾರೆ.