

ಚಿಕ್ಕಬಳ್ಳಾಪುರ: ಪ್ರಮುಖ ವೃತ್ತ ಮತ್ತು ಬಡಾವಣೆ, ರಸ್ತೆಗಳಿಗೆ ನಾಡಿನ ಹೆಸರಾಂತ ಸಾಹಿತಿ, ಸಾಧಕರ ಹೆಸರುಗಳ ನಾಮಫಲಕವನ್ನು ಅಳವಡಿಸಲು ನಗರಸಭೆಯನ್ನು ಚಿಕ್ಕಬಳ್ಳಾಪುರ ತಾಲೂಕು ಕಸಾಪ ಒತ್ತಾಯಿಸಿದೆ. ಇಲ್ಲಿನ ನಗರಸಭಾ ಕಚೇರಿಯ ಸಭಾಂಗಣದಲ್ಲಿ ಅಧ್ಯಕ್ಷ ಎ.ಗಜೇಂದ್ರ ಮತ್ತು ಪೌರಾಯುಕ್ತ ಮನ್ಸೂರು ಅಲಿಗೆ ಸಾಹಿತಿಗಳು, ಶಿಕ್ಷಕರು, ಕಸಾಪ ಪದಾಧಿಕಾರಿಗಳು ಮನವಿ ಪತ್ರ ಸಲ್ಲಿಸಿದ್ದಾರೆ.
ಚಿಕ್ಕಬಳ್ಳಾಪುರ ನಗರ ವ್ಯಾಪ್ತಿಯ ಬಡಾವಣೆಗಳಿಗೆ ಹಾಗೂ ಪ್ರಮುಖ ರಸ್ತೆಗಳಿಗೆ ನಾಡಿನ ಹೆಸರಾಂತ ಸಾಹಿತಿಗಳ ಹೆಸರುಗಳನ್ನೊಳಗೊಂಡ ನಾಮಫಲಕಗಳನ್ನು ಅಳವಡಿಸಬೇಕು. ಇದರಿಂದ ನಾಡು ನುಡಿಯ ಉಳಿವಿಗಾಗಿ ಹೋರಾಡಿದವರನ್ನು ಮುಂದಿನ ಪೀಳಿಗೆಯವರು ಸ್ಮರಿಸಲು ಸಹಕಾರಿಯಾಗುತ್ತದೆ ಎಂದು ತಾಲೂಕು ಕಸಾಪ ಅಧ್ಯಕ್ಷ ಯಲುವಹಳ್ಳಿ ಸೊಣ್ಣೇಗೌಡ ಮನವಿ ಮಾಡಿದ್ದಾರೆ.
*ಒಂದು ತಿಂಗಳಲ್ಲಿ ಸಮಿತಿ ರಚನೆ
ಒಂದು ತಿಂಗಳೊಳಗೆ ಸಮಿತಿ ರಚಿಸಿ ವರದಿಯನ್ನು ಪಡೆದುಕೊಳ್ಳಲಾಗುವುದು. ಸದಸ್ಯರ ವಿಶೇಷ ಸಭೆ ಕರೆದು ಚರ್ಚಿಸಿ, ಬಳಿಕ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ನಗರಸಭಾ ಅಧ್ಯಕ್ಷ ಎ.ಗಜೇಂದ್ರ ಭರವಸೆ ನೀಡಿದರು.
*ಗಮನ ಸೆಳೆದಿದ್ದ ವಿಜಯವಾಣಿ
ಸಾಧಕರನ್ನು ಸ್ಮರಿಸಲು ಅಸಡ್ಡೆ ಶೀರ್ಷಿಕೆಯಡಿ ಪ್ರಮುಖ ರಸ್ತೆ, ಬಡಾವಣೆಗಳಿಗೆ ಮಹನೀಯರ ಹೆಸರನ್ನಿಡಲು ನಿರ್ಲಕ್ಷ್ಯ ತೋರಲಾಗುತ್ತಿದೆ ಎಂದು ವಿಜಯವಾಣಿ ಸುದ್ದಿ ಗಮನ ಸೆಳೆದಿತ್ತು. ಇದರಿಂದ ಕಸಾಪ, ಸ್ಥಳೀಯ ಜನಪ್ರತಿನಿಧಿಗಳು ಸೇರಿದಂತೆ ಹಲವರು ಸೂಕ್ತ ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ಮತ್ತು ಸ್ಥಳೀಯ ಆಡಳಿತ ಸಂಸ್ಥೆಗಳಿಗೆ ಮನವಿ ಸಲ್ಲಿಸುತ್ತಿದ್ದಾರೆ.