

ಲೋಕಾಪುರ: ಶಾಸಕ ಬಸನಗೌಡ ಪಾಟೀಲ ಯತ್ನಾಳ ಉಚ್ಚಾಟಿಸಿದ್ದನ್ನು ಬಿಜೆಪಿ ಹೈಕಮಾಂಡ್ ಹಿಂಪಡೆಯಬೇಕು ಎಂದು ಪಕ್ಷದ ಮುಖಂಡ ಲೋಕಣ್ಣ ಕತ್ತಿ ಆಗ್ರಹಿಸಿದರು.
ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಕೇಂದ್ರದ ಶಿಸ್ತು ಸಮಿತಿ ಯತ್ನಾಳರನ್ನು 6 ವರ್ಷ ಉಚ್ಚಾಟನೆ ಮಾಡಿದ್ದು ಸರಿಯಲ್ಲ. ಉತ್ತರ ಕರ್ನಾಟಕದ ಪ್ರಭಾವಿ ನಾಯಕರಲ್ಲಿ ಒಬ್ಬರಾಗಿರುವ ಯತ್ನಾಳರನ್ನು ಪಕ್ಷದಿಂದ ಉಚ್ಚಾಟನೆ ಮಾಡಿರುವುದರಿಂದ ಸಾಕಷ್ಟು ಕಾರ್ಯಕರ್ತರು ನೊಂದಿದ್ದಾರೆ ಎಂದರು.
ಕೇಂದ್ರದ ವರಿಷ್ಠರು ತೆಗೆದುಕೊಂಡ ತಮ್ಮ ನಿರ್ಧಾರವನ್ನು ಮರುಪರಿಶೀಲಿಸಬೇಕು. ನೇರ ನಿಷ್ಠುರವಾದಿ, ಒಬ್ಬ ಹಿರಿಯ ನಾಯಕನನ್ನು ಕಳೆದುಕೊಂಡರೆ ಪಕ್ಷಕ್ಕೆ ನಷ್ಟವಾಗಲಿದೆ. ಅದರಲ್ಲೂ ಲಿಂಗಾಯತ ಸಮುದಾಯದ ಪ್ರಭಾವಿ ನಾಯಕರಾಗಿದ್ದಾರೆ. ಉಚ್ಚಾಟನೆಯಿಂದ ಪಕ್ಷಕ್ಕೆ ನಷ್ಟ ಉಂಟಾಗಲಿದೆ ಎಂದರು.
ಪಂಚಮಸಾಲಿ ಸಮಾಜದ ಮುಖಂಡ ಪ್ರಕಾಶ ಚುಳಕಿ ಮಾತನಾಡಿ, ಹಿಂದುತ್ವವಾದಿ ಬಸನಗೌಡ ಪಾಟೀಲ ಯತ್ನಾಳ ಉಚ್ಚಾಟನೆ ತೀರ್ಮಾನವನ್ನು ಮರುಪರಿಶೀಲಿಸಬೇಕು. ಪಕ್ಷಕ್ಕಾಗುವ ಹಾನಿ ಸೇರಿ ಎಲ್ಲ ಕೋನಗಳಿಂದಲೂ ಮತ್ತೊಮ್ಮೆ ಪರಿಶೀಲಿಸಿ ನಿರ್ಧಾರ ಕೈಗೊಳ್ಳುವುದು ಸೂಕ್ತವೆಂದು ಒತ್ತಾಯಿಸಿದರು.
ಬಿಜೆಪಿ ಮುಖಂಡ ಸಂತೋಷ ದೇಶಪಾಂಡೆ, ವಕೀಲರಾದ ಅರುಣ ಮುಧೋಳ ಮಾತನಾಡಿ, ಶಾಸಕ ಯತ್ನಾಳ ಅವರು ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ. ಪಕ್ಷ ವಿರೋಧಿ ಹೇಳಿಕೆಯನ್ನೂ ನೀಡಿಲ್ಲ. ಅವರನ್ನು ಉಚ್ಚಾಟನೆ ಮಾಡಿರುವುದು ಲಕ್ಷಾಂತರ ಬಿಜೆಪಿ ಕಾರ್ಯಕರ್ತರಿಗೆ ನೋವಾಗಿದೆ. ಕೂಡಲೇ ವರಿಷ್ಠರು ಉಚ್ಚಾಟನೆ ಆದೇಶ ಹಿಂಪಡೆಯಬೇಕು ಎಂದರು.
ಎಲ್ಲ ಮುಖಂಡರು ಸೇರಿ ಬಸವೇಶ್ವರ ಪತ್ರಿಮೆಗೆ ಮಾಲಾರ್ಪಣೆ ಮಾಡಿದರು. ನಂತರ ತಾಲೂಕು ಬಿಜೆಪಿ ಅಧ್ಯಕ್ಷ ಸಂಗನಗೌಡ ಕಾತರಕಿ ಅವರಿಗೆ ಮನವಿ ಸಲ್ಲಿಸಿದರು.
ಪಿಕೆಪಿಎಸ್ ಅಧ್ಯಕ್ಷ ಹೊಳಬಸು ಕಾಜಗಾರ್, ಪರಮಾನಂದ ಟೊಪನ್ನವರ, ರಮೇಶ ದೇವರಡ್ಡಿ, ಲೋಕಣ್ಣ ಗಡದಿನ್ನಿ, ವಿರೇಶ ಪಂಚಕಟ್ಟಿಮಠ, ಹಣಮಂತ ಹೂಗಾರ, ಸುರೇಶ ಹುಗ್ಗಿ, ದಶರಥ ದೊಡಮನಿ, ದುರ್ಗಪ್ಪ ಮಾದರ, ಭೀಮಶಿ ಅವರಾದಿ, ರವಿ ಚೌಧರಿ, ಚೇತನ್ ಕಣಬೂರ, ಮಹಾನಿಂಗ ಸಕ್ರಿ, ಸಂಜು ಅಪ್ಪನ್ನವರ, ಮಲ್ಲು ಹೆಗ್ಗಳಕಿ, ಸುಮಿತ್ ತುಂಗಳ, ಕಿರಣ ಗಣಪ್ಪಗೋಳ ಇದ್ದರು.