

ಹೊನ್ನಾವರ: ರಾಷ್ಟ್ರೀಯ ಹೆದ್ದಾರಿಯ ಅವೈಜ್ಞಾನಿಕ ಕೆಲಸ ಮತ್ತು ಶಿರೂರು ಗುಡ್ಡ ಕುಸಿತದಿಂದ ನೊಂದವರಿಗೆ ಪರಿಹಾರ ಒದಗಿಸುವ ಕುರಿತು ನ್ಯಾಯಯುತವಾಗಿ ಪ್ರತಿಭಟನೆ ನಡೆಸಿದ 8 ಜನರ ಮೇಲೆ ಸ್ವಯಂ ಪ್ರೇರಿತವಾಗಿ ಪೊಲೀಸರು ಪ್ರಕರಣ ದಾಖಲಿಸಿರುವುದು ಸರಿಯಲ್ಲ ಎಂದು ಹಿರಿಯ ಜಾನಪದ ವಿದ್ವಾಂಸ ಡಾ. ಎನ್.ಆರ್. ನಾಯಕ ಹೇಳಿದರು.
ಪಟ್ಟಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿರೂರಿನಲ್ಲಿ ನಡೆದ ದುರಂತದಲ್ಲಿ ಹಲವರು ಮೃತರಾಗಿದ್ದಾರೆ. ಅಲ್ಲಿ ಮೃತಪಟ್ಟವರಿಗೆ ನ್ಯಾಯಕ್ಕಾಗಿ ಹೋರಾಟ ಮಾಡಲಾಗಿದೆ. ಅಂಥವರ ಮೇಲೆ ಪ್ರಕರಣ ದಾಖಲಿಸಿರುವುದು ಹೋರಾಟದ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನವಾಗಿದೆ. ಈ ಪ್ರಕರಣವನ್ನು ಕೂಡಲೇ ವಾಪಸ್ ಪಡೆದು ಹೋರಾಟಗಾರರಿಗೆ ಬೆಂಬಲ ನೀಡಬೇಕು ಎಂದರು.
ಈಡಿಗ ಮಹಾಮಂಡಳಿಯ ತಾಲೂಕು ಅಧ್ಯಕ್ಷ ದಾಮೋದರ ನಾಯ್ಕ ಮಾತನಾಡಿ, ಸೆ. 12ರಂದು ಎನ್‌ಎಚ್‌ಎಐ ಕಚೇರಿಗೆ ಮುತ್ತಿಗೆ ಹಾಕಲು ತೀರ್ಮಾನಿಸಿ ಶರಾವತಿ ಸರ್ಕಲ್ ಮೂಲಕ ಪಾದಯಾತ್ರೆ ನಡೆಸಿದ್ದೇವು. ಪ್ರತಿಭಟನೆ ಶಾಂತಿಯುತವಾಗಿ ನಡೆದರೂ, ಶ್ರೀ ಪ್ರಣವಾನಂದ ಸ್ವಾಮೀಜಿ ಸೇರಿ 8 ಜನರ ಮೇಲೆ ಪ್ರಕರಣ ದಾಖಲಿಸಿರುವುದು ಅಕ್ಷಮ್ಯ ಅಪರಾಧವಾಗಿದೆ. ಪಿಎಸ್‌ಐ ಮಹಾಂತೇಶ ನಾಯ್ಕ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ. ಪ್ರತಿಭಟನೆಯ ಬಗ್ಗೆ ಸೆ. 6ರಂದು ಸಂಬಂಧಿಸಿದ ಪೊಲೀಸ್ ಠಾಣೆಗೆ ಲಿಖಿತ ರೂಪದಲ್ಲಿ ಮಾಹಿತಿ ನೀಡಿ, ಸ್ವೀಕೃತಿ ಕೂಡ ಪಡೆಯಲಾಗಿದೆ. ಧ್ವನಿವರ್ಧಕಕ್ಕೆ ಚಲನ್ ಮಾಡಲಾಗಿದೆ. ಒಂದು ವೇಳೆ ಅನುಮತಿ ಇಲ್ಲದಿದ್ದರೆ ಪಾದಯಾತ್ರೆಯ ಆರಂಭದಲ್ಲಿಯೇ ತಡೆಯಬಹುದಿತ್ತು. ಪಾದಯಾತ್ರೆಯುದ್ದಕ್ಕೂ ಪೊಲೀಸರು ಭದ್ರತೆ ಕೊಟ್ಟಿದ್ದು ಯಾಕೆ ಎಂದು ಪ್ರಶ್ನಿಸಿದರು. ಭಾರತೀಯ ಕಿಸಾನ್ ಸಂಘದ ಉತ್ತರ ಪ್ರಾಂತ್ಯದ ಪ್ರಧಾನ ಕಾರ್ಯದರ್ಶಿ ಮಾಧವ ಹೆಗಡೆ ಮಾತನಾಡಿದರು.
ಈಡಿಗ ಮಹಾಮಂಡಳಿ ರಾಜ್ಯ ಯುವ ಒಕ್ಕೂಟದ ಅಧ್ಯಕ್ಷ ಸಚಿನ್ ನಾಯ್ಕ, ಕರ್ನಾಟಕ ಕ್ರಾಂತಿರಂಗದ ಜಿಲ್ಲಾಧ್ಯಕ್ಷ ಮಂಗಲದಾಸ ನಾಯ್ಕ, ಕರವೇ ತಾಲೂಕು ಅಧ್ಯಕ್ಷ ಮಂಜುನಾಥ ಗೌಡ, ರಾಜೇಶ ನಾಯ್ಕ ಹೊನ್ನಾವರ, ಜಿಲ್ಲಾ ಕಿಸಾನ್ ಸಂಘದ ಉಪಾಧ್ಯಕ್ಷ ಡಿ.ಎಂ. ನಾಯ್ಕ, ತಾಲೂಕು ಅಧ್ಯಕ್ಷ ವಿ.ಐ. ಹೆಗಡೆ, ಇತರರಿದ್ದರು.