ಜನೌಷಧ ಕೇಂದ್ರ ಮಳಿಗೆ ಸ್ಥಗಿತಗೊಳಿಸುವ ಆದೇಶ ಹಿಂಪಡೆಯಲು ಒತ್ತಾಯ

13
Published on

ಮೈಸೂರು: ಸರ್ಕಾರಿ ಆಸ್ಪತ್ರೆ ಆವರಣದಲ್ಲಿರುವ ಜನೌಷಧ ಕೇಂದ್ರ ಮಳಿಗೆಗಳನ್ನು ಸ್ಥಗಿತಗೊಳಿಸಲು ಆದೇಶಿಸಿರುವ ಸರ್ಕಾರದ ಆದೇಶ ಹಿಂಪಡೆಯುವಂತೆ ಅಖಿಲ ಭಾರತೀಯ ಗ್ರಾಹಕ ಪಂಚಾಯತ್‌ನಿಂದ ಸರ್ಕಾರವನ್ನು ಒತ್ತಾಯಿಸಲಾಯಿತು.

ಚಾಮುಂಡಿಪುರಂನಲ್ಲಿರುವ ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಕಚೇರಿಯಲ್ಲಿ ಗ್ರಾಹಕರ ಸಭೆ ನಡೆಸಿದ ಬಳಿಕ, ಸರ್ಕಾರಿ ಆಸ್ಪತ್ರೆ ಆವರಣದ ಜನೌಷಧ ಕೇಂದ್ರ ಮಳಿಗೆಗಳನ್ನು ಸ್ಥಗಿತಗೊಳಿಸಲು ಆದೇಶಿಸಿರುವ ಸರ್ಕಾರದ ಆದೇಶವನ್ನು ಹಿಂಪಡೆಯುವಂತೆ ಮುಖ್ಯಮಂತ್ರಿಗೆ ಒತ್ತಾಯಿಸಿ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಯಿತು.

ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಅಧ್ಯಕ್ಷ ಸಿ.ಎಸ್.ಚಂದ್ರಶೇಖರ್ ಮಾತನಾಡಿ, ಉಲ್ಲೇಖಿತ ಆದೇಶದಲ್ಲಿ ಸರ್ಕಾರಿ ಆಸ್ಪತ್ರೆ ಆವರಣದ ಜನೌಷಧ ಕೇಂದ್ರ ಮಳಿಗೆಗಳನ್ನು ಕೂಡಲೇ ಸ್ಥಗಿತಗೊಳಿಸಬೇಕೆಂದು ಆದೇಶಿಸಲಾಗಿದೆ. ಜನೌಷಧ ಕಡು ಬಡವ ಹಾಗೂ ಜನಸಾಮಾನ್ಯರಿಗೆ ಕಡಿಮೆ ದರದಲ್ಲಿ ಲಭ್ಯವಾಗುವ ದಿವ್ಯ ಔಷಧ ಸಂಜೀವಿನಿಯಾಗಿತ್ತು ಎಂದರು.

ಆದರೆ, ಜನೌಷಧ ಕೇಂದ್ರ ಮಳಿಗೆಗಳನ್ನು ಸರ್ಕಾರಿ ಆಸ್ಪತ್ರೆಯ ಆವರಣದಿಂದ ಸ್ಥಗಿತಗೊಳಿಸಲು ಆದೇಶಿಸಿಸಿರುವುದು ರಾಜ್ಯ ಸರ್ಕಾರ ಯಾವುದೋ ಹಿತಾಸಕ್ತಿಗಳನ್ನು ಸಂತೃಪ್ತಿಗೊಳಿಸಲು ತೆಗೆದುಕೊಂಡಿರುವ ಕ್ರಮವಾಗಿರುತ್ತದೆ. ಆದ್ದರಿಂದ ಜನಸಾಮಾನ್ಯರಿಗೆ ಲಭ್ಯವಾಗುತ್ತಿದ್ದ ಜನೌಷಧಗಳು ಯಥಾ ರೀತಿ ದೊರೆಯುವಂತೆ ಮಾಡಲು ಸರ್ಕಾರದ ಆದೇಶವನ್ನು ಹಿಂಪಡೆಯಬೇಕಾಗಿದೆ ಎಂದು ಕೋರಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಆರಂಭಿಸಿರುವ ಪಿಎಂ ಬಿಜೆಪಿ ಯೋಜನೆಯಡಿಯಲ್ಲಿ ಜನೌಷಧ ಕೇಂದ್ರ ಮಳಿಗೆಗಳನ್ನು ತೆರೆಯಲಾಗಿದ್ದು, ಜನೌಷಧ ಕೇಂದ್ರ ಮಳಿಗೆಗಳಲ್ಲಿ ಶೇ.70 ರಿಂದ 90ರಷ್ಟು ಕಡಿಮೆ ಬೆಲೆಯಲ್ಲಿ ಜನರಿಕ್ ಔಷಧ ಲಭ್ಯವಾಗುತ್ತಿದ್ದು, ಬಡವರ ಔಷಧೀಯ ಸಂಜೀವಿನಿಯಾಗಿತ್ತು ಎಂದರು.

ಇದರಿಂದ ಸಾರ್ವಜನಿಕರಿಗೆ ಔಷಧೋಪಚಾರಗಳ ವೆಚ್ಚ ಅತ್ಯಂತ ಕಡಿಮೆಯಾಗಿ ಲಭ್ಯವಾಗಿ ಆರೋಗ್ಯವನ್ನು ಸುಧಾರಿಸಿಕೊಳ್ಳಲು ದಾರಿ ದೀಪವಾಗಿತ್ತು. ಸರ್ಕಾರದ ಕ್ರಮದಿಂದ ಜನೌಷಧ ಕೇಂದ್ರ ಮಳಿಗೆಗಳನ್ನು ಸರ್ಕಾರಿ ಆಸ್ಪತ್ರೆ ಆವರಣದಿಂದ ಸ್ಥಗಿತಗೊಳಿಸಲು ಆದೇಶಿಸಿರುವುದು ಜನಸಾಮಾನ್ಯರಿಗೆ ತೊಂದರೆಯಾಗಲೇಬೇಕೆಂಬ ಉದ್ದೇಶದಿಂದ ಹೊರಡಿಸಿರುವ ಆದೇಶವಾಗಿರುತ್ತದೆ. ಆದ್ದರಿಂದ ಈ ಕೂಡಲೇ ಸರ್ಕಾರದ ಆದೇಶವನ್ನು ಹಿಂಪಡೆದು ಯಥಾಸ್ಥಿತಿ ಜನೌಷಧ ಮಳಿಗೆ ಮುಂದುವರಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಲಾಯಿತು.

ಅಖಿಲ ಭಾರತೀಯ ಗ್ರಾಹಕ ಪಂಚಾಯಿತಿ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್, ಮುಖಂಡರಾದ ಅಜಯ್ ಶಾಸ್ತ್ರಿ, ಆನಂದ್, ರಾಮಚಂದ್ರ, ಹರ್ಷ, ಕೀರ್ತಿ, ನಿತಿನ್‌ಅರಸ್, ಕಾರ್ತಿಕ್, ಶ್ರೀಕಾಂತ್ ಕಶ್ಯಪ್, ಜತ್ತಿ ಪ್ರಸಾದ್, ಕಾರ್ತಿಕ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net