ತಂತ್ರಜ್ಞಾನದಿಂದ ಮಕ್ಕಳ ವಯಸ್ಸು ಪರಿಶೀಲನೆ ನಡೆಸುವಂತೆ ಆಗ್ರಹ

Published on

ಮೈಸೂರು: ದಸರಾ ಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸುವ 15 ಹಾಗೂ 17 ವಯೋಮಾನದ ಮಕ್ಕಳಿಗೆ ಕಡ್ಡಾಯವಾಗಿ ತಂತ್ರಜ್ಞಾನದ ಮೂಲಕ ವಯಸ್ಸು ಪರಿಶೀಲನೆ ಮಾಡುವಂತೆ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಪ್ರವೀಣ್ ಕುಮಾರ್ ಆಗ್ರಹಿಸಿದ್ದಾರೆ.

ಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸಿ ವಿಜೇತರಾಗುವ 15, 17 ವರ್ಷದ ಮಕ್ಕಳಿಗೆ ಬಾಲಕುಮಾರ, ಬಾಲಕೇಸರಿ, ಬಾಲಕಿಶೋರ, ಬಾಲ ಕಂಠೀರವ ಬಿರುದುಗಳನ್ನು ನೀಡುವುದು ವಾಡಿಕೆ. ಆದರೆ, ಈ ಬಾರಿ ಕುಸ್ತಿ ಪಟುಗಳ ನೈಜವಾದ ವಯೋಮಿತಿ ನೀಡದೆ ನಕಲು ಜನ್ಮ ದಿನಾಂಕವನ್ನು ಬರೆಸಿರುವುದು ಕಂಡು ಬಂದಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

ಈಗಾಗಲೇ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯುಕ್ತ ಚೇತನ್ ಅವರು ಈ ಕುರಿತು ಸುತ್ತೋಲೆ ಹೊರಡಿಸಿ ತನಿಖೆ ನಡೆಸಲು ಆದೇಶಿಸಿದ್ದಾರೆ. ಸಹಾಯಕ ನಿರ್ದೇಶಕ ಗುರುಪಾದ ಡೊಂಗಣ್ಣ ಅವರಿಗೆ ತನಿಖೆ ಜವಾಬ್ದಾರಿ ನೀಡಲಾಗಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಅವರ ಬಳಿ ಲಭ್ಯವಿದ್ದು ವರದಿ ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು.

ನಕಲಿ ಜನ್ಮ ದಿನಾಂಕ ನೀಡಿರುವ ಎಲ್ಲ ತರಬೇತುದಾರರ ಮೇಲೆ ತನಿಖೆ ಮಾಡಬೇಕು. ಅತಿ ಹೆಚ್ಚು ಹಗರಣವಾಗಿರುವ ದಾವಣಗೆರೆ, ಬಾಗಲಕೋಟೆ ಭಾಗದ ಕುಸ್ತಿಪಟುಗಳಿಗೆ ತಂತ್ರಜ್ಞಾನ ಬಳಸಿಕೊಂಡು ವಯೋಮಿತಿ ಪರೀಕ್ಷಿಸಬೇಕು. ಇಲ್ಲವಾದರೆ ನಿಜವಾದ ಪ್ರತಿಭೆಗಳಿಗೆ ಅವಕಾಶವಿಲ್ಲದಂತೆ ಆಗುತ್ತದೆ ಎಂದರು.

ಈಗಾಗಲೇ ಜಿಲ್ಲಾಧಿಕಾರಿ, ಕುಸ್ತಿ ಉಪಸಮಿತಿಗೂ ದೂರು ನೀಡಲಾಗಿದೆ. ಪ್ರಾಮಾಣಿಕವಾಗಿ ಕುಸ್ತಿ ಪಂದ್ಯಾವಳಿಗಳನ್ನು ಆಯೋಜನೆ ಮಾಡಬೇಕು. ಇಲ್ಲವಾದರೆ ಹೋರಾಟ ಮಾಡಬೇಕಾಗುತ್ತದೆ ಎಂದು ಹೇಳಿದರು.

ವೇದಿಕೆಯ ಲೋಕೇಶ್‌ಕುಮಾರ್, ಹೇಮಂತ್‌ಗೌಡ, ಇಮ್ರಾನ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net