ಯೂರಿಯಾಗಾಗಿ ರೈತರು ಪರದಾಟ ; ದಾಸ್ತಾನು ಕೊರತೆಯಿಂದ ಸಮಸ್ಯೆ

IMG_20200915_132137
Published on

ಮುಳಬಾಗಿಲು: ಉತ್ತಮ ಮಳೆ, ಸಮೃದ್ಧಿ ಬೆಳೆಯಿಂದ ಸಂತಸದಲ್ಲಿದ್ದ ರೈತರಿಗೆ ಈಗ ಸೂಕ್ತ ಸಮಯದಲ್ಲಿ ಯೂರಿಯಾ ಗೊಬ್ಬರ ಸಿಗದೆ ಪರದಾಡುವಂತಾಗಿದೆ.

ಯೂರಿಯಾ ಗೊಬ್ಬರದ ದಾಸ್ತಾನು ಕಡಿಮೆಯಾಗಿದ್ದು, ಬೇಡಿಕೆ ಹೆಚ್ಚಾಗಿರುವ ಕಾರಣ ಸಮಸ್ಯೆ ತಲೆದೋರಿದೆ. ಅಲ್ಲದೇ ಭೂಮಿಯ ತೇವಾಂಶ ಹೆಚ್ಚಾಗಿರುವ ಕಾರಣ ಉತ್ತಮ ಬೆಳೆ ಮತ್ತು ತ್ವರಿತ ಸಲು ನಿರೀಕ್ಷೆಗೆ ಒಳಗಾಗಿರುವ ರೈತ ಅವಶ್ಯಕತೆಗಿಂತ ಹೆಚ್ಚು ಯೂರಿಯಾ ಬಳಸುತ್ತಿರುವುದು ಅಗತ್ಯಕಿಂತ ಹೆಚ್ಚು ಬೇಡಿಕೆ ಕಂಡುಬರುತ್ತಿದೆ.

ತಾಲೂಕಿನಲ್ಲಿ ಒಟ್ಟು 25,295 ಹೆಕ್ಟರ್ ಪ್ರದೇಶ ಕೃಷಿ ಚಟುವಟಿಕೆಗಳಿಂದ ಕೂಡಿದ್ದು, ಈ ಸಾಲಿನಲ್ಲಿ 21,633 ಹೆಕ್ಟರ್ ಪ್ರದೇಶದಲ್ಲಿ ವಿವಿಧ ಕೃಷಿ ಬೆಳೆಗಳು ಬಿತ್ತನೆಯಾಗಿದೆ. ನೆಲಗಡಲೆ ಈಗಾಗಲೇ ಫಸಲು ಬರುತ್ತಿದ್ದು ಇದನ್ನು ಹೊರತುಪಡಿಸಿ ಉಳಿದ ಬೆಳೆಗಳಾದ ಭತ್ತ, ರಾಗಿ, ಮುಸುಕಿನ ಜೋಳ, ಮೇವಿನ ಜೋಳ, ತೃಣ ಧಾನ್ಯ, ತೊಗರಿ, ಅವರೆ, ಅಲಸಂಧಿಯನ್ನು ಈಗಾಗಲೆ ಬಿತ್ತನೆ ಮಾಡಿದ್ದು, ಉತ್ತಮ ಮಳೆಯಾಗುತ್ತಿರುವುದರಿಂದ ಯೂರಿಯಾ ಬಳಕೆ ಮಾಡಲು ರೈತ ಕಾಯುತ್ತಿದ್ದಾನೆ. ಇನ್ನೊಂದೆಡೆ ಕೆರೆ ಕುಂಟೆಗಳು, ಕೃಷಿ ಹೊಂಡಗಳು ತುಂಬಿದ್ದು ನೀರಾವರಿ ಭತ್ತ ಬಿತ್ತನೆ (ಪೈರುನಾಟಿ) ಕಾರ್ಯದಲ್ಲಿ ತೊಡಗಿದ್ದರಿಂದ ಯೂರಿಯಾ ಗೊಬ್ಬರಕ್ಕೆ ಬೇಡಿಕೆ ಹೆಚ್ಚಾಗಿದೆ.

ಕಳೆದ ಶನಿವಾರ ಟಿಎಪಿಸಿಎಂಎಸ್ ಗೋದಾಮಿಗೆ 35 ಟನ್ ಇಪ್ರೋ ಸಂಸ್ಥೆ ಯೂರಿಯಾ ಪೂರೈಕೆಯಾಗಿದ್ದು ಮುಳಬಾಗಿಲು, ಎನ್.ವಡ್ಡಹಳ್ಳಿ, ಬೈರಕೂರು ಮಾರಾಟ ಕೇಂದ್ರಗಳಲ್ಲಿ ರೈತರಿಗೆ ವಿತರಿಸಲಾಗಿದೆ. ಮಂಗಳವಾರ ಬೆಳಗ್ಗೆ 40 ಟನ್ ಯೂರಿಯಾ ಬಂದಿದ್ದು, ಕೇವಲ 2 ಗಂಟೆಗಳಲ್ಲಿ ಅಷ್ಟೂ ಗೊಬ್ಬರ ಖಾಲಿಯಾಗಿದೆ. ತಾಯಲೂರು, ನಂಗಲಿ, ಮುಳಬಾಗಿಲು, ಎನ್.ವಡ್ಡಹಳ್ಳಿ ಖಾಸಗಿ ರಸಗೊಬ್ಬರ ಮಾರಾಟ ಮಳಿಗೆಗಳಲ್ಲಿ ರೈತರ ಆಧಾರ್‌ಕಾರ್ಡ್ ಪಡೆದು ಪ್ರತಿಯೊಬ್ಬರಿಗೂ 45 ಕೆ.ಜಿಯ ಎರಡು ಚೀಲ ವಿತರಿಸುವ ವ್ಯವಸ್ಥೆ ಮಾಡಲಾಗಿದೆ. ಅಮರನಾರಾಯಣರೆಡ್ಡಿ ಸಹಾಯಕ ನಿರ್ದೇಶಕ ಕೃಷಿ ಇಲಾಖೆ ಮುಳಬಾಗಿಲು ರೈತರ ಬೇಡಿಕೆಗೆ ಅನುಗುಣವಾಗಿ ಯೂರಿಯಾ ಪೂರೈಕೆಯಾಗುತ್ತಿಲ್ಲ. ಗೊಬ್ಬರದ ಅಂಗಡಿಗಳ ಮುಂದೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಸಾವಯವ ಯೂರಿಯಾ ಬಗ್ಗೆ ರೈತರಿಗೆ ಮಾಹಿತಿ ನೀಡಿ ರೈತರೇ ತಯಾರಿಸಿಕೊಳ್ಳುವಂತಹ ವ್ಯವಸ್ಥೆಗೆ ಒತ್ತು ನೀಡಬೇಕು. ಆರ್.ಸುಬ್ರಮಣಿ ರಾಜೇಂದ್ರಹಳ್ಳಿ, ಮುಳಬಾಗಿಲು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net