

ಹೊರ್ತಿ: ಸಮೀಪದ ತಿಡಗುಂದಿಯ ತೋಟಗಾರಿಕೆ ಸಂಶೋಧನಾ ಕೇಂದ್ರವನ್ನು ಮುಖ್ಯ ತೋಟಗಾರಿಕೆ ಸಂಶೋಧನಾ ಕೇಂದ್ರವಾಗಿ ಮೇಲ್ದರ್ಜೆಗೇರಿಸುವುದು ಸೇರಿ ರೈತಪರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗಹಿಸಿ ತೋಟಗಾರಿಕೆ ವಿಶ್ವವಿದ್ಯಾಲಯದ ಸಂಶೋಧನಾ ಪರಿಷತ್ ಸದಸ್ಯ ವಿಜಯಪುರದ ಡಾ.ಎಂ.ಬಿ. ಪಟ್ಟಣಶೆಟ್ಟಿ ಒತ್ತಾಯಿಸಿದ್ದಾರೆ.
ಈ ಕುರಿತು ತೋಟಗಾರಿಕೆ ವಿವಿ ಕುಲಪತಿ ಡಾ. ವಿಷ್ಣುವರ್ಧನ್ ಅವರನ್ನು ಭೇಟಿ ಮಾಡಿ ಮನವಿ ಅರ್ಪಿಸಿದ್ದಾರೆ.
ವಿಜಯಪುರ ಜಿಲ್ಲೆ ದ್ರಾಕ್ಷಿ, ದಾಳಿಂಬೆ, ಲಿಂಬೆ, ಸೀತಾಫಲ, ಪೇರಲ ಮತ್ತಿತರ ಉಷ್ಣವಲಯದ ಹಣ್ಣಿನ ಬೆಳೆಗಳಿಗೆ ಇಡೀ ಭಾರತ ದೇಶದಲ್ಲೇ ಹೆಸರುವಾಗಿದೆ. ಅಂದಾಜು 30 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ದ್ರಾಕ್ಷಿ, 7 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಲಿಂಬೆ, 10 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ದಾಳಿಂಬೆ ಮತ್ತು ಇತರೆ ಉಷ್ಣ ವಲಯದ ಹಣ್ಣಿನ ಬೆಳೆಗಳನ್ನು ವ್ಯಾಪಕವಾಗಿ ಬೆಳೆಯಲಾಗುತ್ತಿದೆ. ತರಕಾರಿ, ಹೂ, ಮತ್ತು ಸಾಂಬಾರ ಬೆಳೆಗಳಾದ ಮೆಣಸಿನಕಾಯಿ, ಅಜವಾನ, ಉಳ್ಳಾಗಡ್ಡಿ ಬೆಳೆಗಳನ್ನೂ ಗಣನೀಯ ಪ್ರಮಾಣದಲ್ಲಿ ಬೆಳೆಯಲಾಗುತ್ತಿದೆ. ಈ ಎಲ್ಲ ತೋಗಾರಿಕೆ ಬೆಳೆಗಳಿಂದ ವಾರ್ಷಿಕ ಅಂದಾಜು 10 ಸಾವಿರ ಕೋಟಿ ರೂ. ವಹಿವಾಟು ನಡೆಯುತ್ತಿದ್ದು, ರೈತರ ಮತ್ತು ಗ್ರಾಮೀಣ ಜನರ ಆರ್ಥಿಕ ಅಭಿವೃದ್ಧಿಯಲ್ಲಿ ಮತ್ತು ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಯಲ್ಲಿ ತೋಟಗಾರಿಕೆ ಬೆಳೆಗಳು ಪ್ರಮುಖ ಪಾತ್ರವಹಿಸಿವೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬಾಗಲಕೋಟೆ ಅಧೀನದಲ್ಲಿರುವ, ತಿಡಗುಂದಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ‘ತೋಟಗಾರಿಕೆ ಮತ್ತು ವಿಸ್ತರಣಾ ಕೇಂದ್ರ’, ತೋಟಗಾರಿಕೆ ರೈತರಿಗೆ ಅವಶ್ಯವಿರುವ ತಂತ್ರಜ್ಞಾನ ಮತ್ತು ಮಾಹಿತಿ ಒದಗಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ. ಆದರೆ, ಈ ಕೇಂದ್ರದಲ್ಲಿ ಸಿಬ್ಬಂದಿ (ವಿಜ್ಞಾನಿಗಳ), ಅತ್ಯಾಧುನಿಕ ಪ್ರಯೋಗಾಲಯ, ಕ್ಷೇತ್ರ ಭೇಟಿಗಾಗಿ ವಾಹನ, ತೋಟಗಾರಿಕೆ ಉತ್ಪನ್ನಗಳ ಮೌಲ್ಯವರ್ಧನೆ ಸೌಲಭ್ಯ, ಸಿಬ್ಬಂದಿ ವಸತಿ ನಿಲಯಗಳು ಇಲ್ಲವಾಗಿದ್ದು, ಇದರಿಂದ ರೈತರಿಗೆ ಅಗತ್ಯ ತಂತ್ರಜ್ಞಾನ ಮತ್ತು ಮಾಹಿತಿಯನ್ನು ಸಕಾಲದಲ್ಲಿ ಒದಗಿಸಲು ಸಾಧ್ಯವಾಗುತ್ತಿಲ್ಲ ಎಂದು ಅವರು ಹೇಳಿದ್ದಾರೆ. ರೈತರು ನೆರೆಯ ಮಹಾರಾಷ್ಟ್ರಕ್ಕೆ ಹೋಗಬೇಕಾದ ಪರಿಸ್ಥಿತಿ ಉಂಟಾಗಿದೆಯಲ್ಲದೆ, ಸದ್ಯಕ್ಕೆ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಜ್ಞಾನಿಗಳ ಮೇಲೂ ಕೆಲಸದ ಒತ್ತಡ ಹೆಚ್ಚಾಗಿ, ರೈತರಿಗೆ ಸಕಾಲದಲ್ಲಿ ಸಮರ್ಪಕ ಸೇವೆ ಒದಗಿಸುವಲ್ಲಿ ತೊಂದರೆಯಾಗುತ್ತಿದೆ. ಇ ಇದಲ್ಲದೆ ಈ ಕೇಂದ್ರವು ಇಡೀ ವಿಜಯಪುರ ಜಿಲ್ಲೆಗೆ, ತೋಟಗಾರಿಕೆ ಬೆಳೆಗಳಿಗೆನೇ ಮೀಸಲಾದ ಸಂಶೋಧನಾ ಮತ್ತು ವಿಸ್ತರಣಾ ಸೇವೆಗಳನ್ನು ಒದಗಿಸುವ ಏಕೈಕ ಕೇಂದ್ರವಾಗಿದೆ. ತಿಡಗುಂದಿಯಲ್ಲಿರುವ ತೋಟಗಾರಿಕೆ ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರವನ್ನು ಮುಖ್ಯ ತೋಟಗಾರಿಕೆ ಸಂಶೋಧನಾ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸಿ ಮೂಲಸೌಲಭ್ಯ ಕಲ್ಪಿಸಿದರೆ ಈ ಭಾಗದ ತೋಟಗಾರಿಕೆ ರೈತರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.