ತುಮಕೂರು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ರಾಜೀನಾಮೆಗೆ ಪಟ್ಟು

download
Published on

ತುಮಕೂರು: ಜಿಲ್ಲಾ ಪಂಚಾಯಿತಿ ಸದಸ್ಯರ ಸತತ ಗೈರಿನ ಕಾರಣಕ್ಕೆ ಎರಡು ಸಾಮಾನ್ಯಸಭೆ ನಡೆಯದೆ ಅಧ್ಯಕ್ಷೆ ಲತಾ, ಉಪಾಧ್ಯಕ್ಷೆ ಶಾರದಾ ಖುರ್ಚಿ ಅಳಿವು, ಉಳಿವಿನ ಪ್ರಶ್ನೆ ಎದುರಾಗಿರುವ ನಡುವೆಯೇ ಶನಿವಾರ ಕರೆದಿರುವ ವಿಶೇಷಸಭೆ ನಡೆಯುವ ಬಗ್ಗೆಯೂ ಅನುಮಾನಗಳಿವೆ.

ಅಧ್ಯಕ್ಷೆ ಲತಾ ರಾಜೀನಾಮೆ ನೀಡಬೇಕು ಎಂದು ಸ್ವತಃ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸೂಚಿಸಿದ್ದಾರೆ ಎನ್ನಲಾಗಿದ್ದು, ಲತಾ ರಾಜೀನಾಮೆ ನೀಡದೆ ಸಭೆ ಕರೆಯುತ್ತಿರುವುದು ಜೆಡಿಎಸ್ ಸದಸ್ಯರ ಅಸಮಾಧಾನಕ್ಕೆ ಕಾರಣವಾಗಿದೆ. ಮೂರನೇ ಸಭೆಯೂ ಮುಂದೂಡಿಕೆಯಾದರೆ ಸರ್ಕಾರದ ಕಾರ್ಯಕ್ರಮಗಳಿಗೆ ತೊಂದರೆ ಎದುರಾಗಲಿದೆ.

ಪಶು ಔಷಧ ಖರೀದಿ ಹಾಗೂ ಕೃಷಿ ಇಲಾಖೆಯಲ್ಲಿ ಬಿತ್ತನೆ ಬೀಜ ಖರೀದಿ ಮತ್ತಿರರ ಪ್ರಮುಖ ವಿಷಯಗಳಿಗೆ ಜಿಪಂ ಸಾಮಾನ್ಯಸಭೆಯ ಒಪ್ಪಿಗೆ ಅಗತ್ಯವಾಗಿದೆ, ರಾಜ್ಯ ಬಜೆಟ್‌ಗೂ ಮುನ್ನಾ ಈ ಪ್ರಕ್ರಿಯೆ ಮುಗಿಸಬೇಕಿದ್ದರೂ ಸದಸ್ಯರ ಅಧಿಕಾರಕ್ಕಾಗಿ ಹಗ್ಗಾಜಗ್ಗಾಟ ರೈತರಿಗೆ ಸಂಕಷ್ಟ ಎದುರಾಗುವಂತೆ ಮಾಡಿದೆ.

ಸದಸ್ಯತ್ವ ರದ್ದಾಗುವ ಭೂತ: ಸತತ ಮೂರು ಸಾಮಾನ್ಯಸಭೆಗೆ ಸದಸ್ಯರು ಗೈರಾದರೆ ಸದಸ್ಯತ್ವ ರದ್ದಾಗುವ ಕಾನೂನು ಮುಂದಿಟ್ಟುಕೊಂಡು ಸಭೆಗೆ ಹಾಜರಾಗುವಂತೆ ಸದಸ್ಯರಿಗೆ ಅಧ್ಯಕ್ಷೆ, ಉಪಾಧ್ಯಕ್ಷೆ ಆಹ್ವಾನಿಸುತ್ತಿದ್ದಾರೆ ಎನ್ನಲಾಗಿದ್ದು, ಈ ಭೂತಕ್ಕೆ ಸದಸ್ಯರು ಸೊಪ್ಪು ಹಾಕಿಲ್ಲ ಎನ್ನಲಾಗಿದೆ. ಅಗತ್ಯ ಕೋರಂ ಇಟ್ಟುಕೊಂಡು ನಡೆದ ಮೂರು ಸಭೆಗೆ ಗೈರಾದರೆ ಮಾತ್ರ ಸದಸ್ಯತ್ವ ರದ್ದಾಗಲಿದೆ ಸಭೆಯೇ ನಡೆಯದೇ ಸದಸ್ಯತ್ವ ರದ್ದು ಪ್ರಶ್ನೆಯೇ ಬರುವುದಿಲ್ಲ ಹಾಗಾಗಿ, ಸಭೆಯಲ್ಲಿ ಹಾಜರಾಗುವ ಪ್ರಶ್ನೆಯೇ ಇಲ್ಲ, ಹಾಸದಲ್ಲಿಯೂ ಇದೇ ರೀತಿಯಾಗಿ ಮೂರು ಸಭೆಗಳು ಮುಂದೂಡಿಕೆಯಾದ ಉದಾಹರಣೆಯಿದೆ ಎಂದು ಜೆಡಿಎಸ್ ಹಿರಿಯ ಸದಸ್ಯರೊಬ್ಬರು ‘ವಿಜಯವಾಣಿ’ಗೆ ತಿಳಿಸಿದರು.

ಅಧ್ಯಕ್ಷೆ ಲತಾ ಅವರಿಗೆ ರಾಜೀನಾಮೆ ನೀಡುವಂತೆ ಪಕ್ಷದ ಮುಖಂಡರು ಸೂಚಿಸಿದ್ದು ಅವರ ಆದೇಶ ಪಾಲಿಸಿದರಷ್ಟೇ ನಾವು ಸಹಕಾರ ನೀಡುತ್ತೇವೆ, ಹಾಲಿ ಅಧ್ಯಕ್ಷರ ಬಗ್ಗೆ ನಮಗೆ ವಿಶ್ವಾಸ ಇಲ್ಲವಾಗಿದ್ದು, ಅವರು ರಾಜೀನಾಮೆ ನೀಡಿದರಷ್ಟೇ ಸಭೆ, ಅನುಮೋದನೆ. ಕಲ್ಲೇಶ್ ಜಿಪಂ ಸದಸ್ಯ(ಜೆಡಿಎಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net