ಬಜೆಟ್ ಹಿನ್ನೆಲೆ ಸರ್ಕಾರಕ್ಕೆ ಆಗ್ರಹ, ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗೆ ಮನವಿ, ಬಿಸಿಯೂಟ ಕಾರ್ಮಿಕರ ಗೌರವ ಧನ ಹೆಚ್ಚಿಸಿ

AKSHARA DASOHA
ವಿಜಯಪುರ ಜಿಲ್ಲಾಡಳಿತಕ್ಕೆ ಕರ್ನಾಟಕ ರಾಜ್ಯ ಸಂಯುಕ್ತ ಅಕ್ಷರ ದಾಸೋಹ ಕಾರ್ಮಿಕರ ಸಂಘ ಹಾಗೂ ಎಐಯಿಟಿಯುಸಿ ನೇತೃತ್ವ ಕಾರ್ಮಿಕರು ಮನವಿ ಸಲ್ಲಿಸಿದರು. ಶಶಿಕಲಾ ಮ್ಯಾಗೇರಿ, ಮಲ್ಲಿಕಾರ್ಜುನ ಎಚ್.ಟಿ, ಗಂಗೂಬಾಯಿ ಉಳ್ಳಾಗಡ್ಡಿ ಮತ್ತಿತರರಿದ್ದಾರೆ.
Published on

ವಿಜಯಪುರ: ಪ್ರಸಕ್ತ ಆಯವ್ಯದಲ್ಲಿ ಬಿಸಿಯೂಟ ಕಾರ್ಮಿಕರ ಗೌರವ ಧನ ಹೆಚ್ಚಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತ ಅಕ್ಷರ ದಾಸೋಹ ಕಾರ್ಮಿಕರ ಸಂಘ ಹಾಗೂ ಎಐಯಿಟಿಯುಸಿ ನೇತೃತ್ವ ನೂರಾರು ಕಾರ್ಮಿಕರು ಶನಿವಾರ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ನೇತೃತ್ವ ವಹಿಸಿದ್ದ ಜಿಲ್ಲಾ ಸಂಚಾಲಕಿ ಶಶಿಕಲಾ ಮ್ಯಾಗೇರಿ ಮಾತನಾಡಿ, ವಿವಿಧ ಸರ್ಕಾರಿ ಹಾಗೂ ಅನುದಾನಿತ ಪ್ರಾಥಮಿಕ, ಪ್ರೌಢಶಾಲೆಗಳಲ್ಲಿವಿದ್ಯಾರ್ಥಿಗಳ ಅಪೌಷ್ಟಿಕತೆ ನೀಗಿಸಲು ಬಿಸಿಯೂಟ ಕಾರ್ಯಕ್ರಮ ಅತ್ಯಂತ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗಿದೆ. ಈ ಕಾರ್ಯಕ್ರಮ ಯಶಸ್ವಿಯಾಗಲು ಬೆನ್ನೆಲುಬು ಆಗಿರುವವರು ಮಹಿಳಾ ಸಿಬ್ಬಂದಿ. ಆದರೆ, ಈ ಸಿಬ್ಬಂದಿಯೇ ಸಂಕಷ್ಟದಲ್ಲಿದ್ದಾರೆ. ಅತ್ಯಂತ ಕಡಿಮೆ ಗೌರವಧನದಲ್ಲಿ ದುಡಿಯುತ್ತಿದ್ದಾರೆ. ಹೀಗಾಗಿ ಅವರ ಗೌರವ ಧನ ಮೊತ್ತ ಹೆಚ್ಚಿಸಬೇಕೆಂದು ಆಗ್ರಹಿಸಿದರು.

ಎಐಯುಟಿಯು ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಎಚ್.ಟಿ ಮಾತನಾಡಿ, ಬಿಸಿಯೂಟ ತಯಾರಕರ ಸುರಕ್ಷತೆಗೆ ಬೇಕಾಗಿರುವ ಸಾಮಾಗ್ರಿಗಳಾದ ಹತ್ತಿ ಬಟ್ಟೆ ಸೀರೆ, ಏಪ್ರಾನ್, ಕೈಗವಚ ಹಾಗೂ ತಲೆಗೆ ಸ್ಕಾರ್ಫ್ ನೊಂದಿಗೆ ಕೆಲಸ ನಿರ್ವಹಿಸಬೇಕೆಂಬ ನಿರ್ದೇಶನವಿದೆ, ಆದರೆ ಇದನ್ನು ಪಾಲಿಸುತ್ತಿಲ್ಲ. ಬಹುತೇಕ ಕಡೆಗಳಲ್ಲಿ ಇವರದಲ್ಲದ ಕೆಲಸಕ್ಕೆ ಬಳಸಿಕೊಳ್ಳಲಾಗುತ್ತಿದೆ. ಹೀಗಾಗಿ ಇವರನ್ನು ಖಾಯಂ ನೌಕರರೆಂದು ಪರಿಗಣಿಸಬೇಕು. ಆರೋಗ್ಯ ರಕ್ಷಣೆ, ನಿವೃತ್ತಿ ಬಳಿಕ ಪಿಂಚಣಿ ಸೌಲಭ್ಯ ಸೇರಿದಂತೆ ಮತ್ತಿತರ ಸೌಕರ್ಯ ಕಲ್ಪಿಸಬೇಕೆಂದರು.

ಬಸಮ್ಮ ಬಿ, ಗಂಗೂಬಾಯಿ ಉಳ್ಳಾಗಡ್ಡಿ, ಚನ್ನಮ್ಮ ಪೆಂಟದ್, ಮಂಜುಳಾ ಕುಳಗೇರಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net