ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ವಿರುದ್ಧ ಕ್ರಮ ವಹಿಸಲು ಒತ್ತಾಯ

raichur
raichur
Published on

ರಾಯಚೂರು ಬಸವ ತತ್ವವನ್ನು ಅವಹೇಳನ ಮಾಡುವ ರೀತಿಯಲ್ಲಿ ಮಾತನಾಡಿರುವ ಮಹಾರಾಷ್ಟ್ರದ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಜಾಗತಿಕ ಲಿಂಗಾಯತ ಮಹಾಸಭಾ ತಾಲೂಕು ಘಟಕದಿಂದ ನಗರದ ಜಿಲ್ಲಾಡಳಿತ ಭವನದಲ್ಲಿ ಶನಿವಾರ ಎಡಿಸಿ ಶಿವಾನಂದ ಭಜಂತ್ರಿಗೆ ಮನವಿ ಸಲ್ಲಿಸಿದರು.

ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ತ ತಾಲ್ಲೂಕಿನ ಬೀಳೂರು ವಿರಕ್ತ ಮಠದ ಕಾರ್ಯಕ್ರಮದಲ್ಲಿ, ಲಿಂಗಾಯತ ಮಾಠಾಧೀಶರ ಬಗ್ಗೆ ಕೆಟ್ಟ ಪದಗಳಲ್ಲಿ ನಿಂದನೆ ಮಾಡಿರುವ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮಿಗಳು ಲಿಂಗಾಯತ ಧರ್ಮ ಹಾಗೂ ಬಸವ ಭಕ್ತರ ಭಾವನೆಗೆ ಧಕ್ಕೆಯನ್ನುಂಟು ಮಾಡಿದ್ದಾರೆ ಎಂದು ಆರೋಪಿಸಿದರು.

ಸೆ.1ರಿಂದ 30ರವರೆಗೆ ನಡೆದ ಬಸವ ಸಂಸ್ಕೃತಿ ಅಭಿಯಾನವು ಅ.5 ರಂದು ಬೆಂಗಳೂರಿನಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿತ್ತು. ಈ ಹಿನ್ನೆಲೆಯಲ್ಲಿ ಬಸವ ತತ್ವದ ನಿಜಾರ್ಥವನ್ನು ಜನಮಾನಸಕ್ಕೆ ತಲುಪಿಸಿದ ಮಠಾಧೀಶರನ್ನು ಪಾದರಕ್ಷೆಯಿಂದ ಹೊಡೆಯಬೇಕು ಎಂಬ ನುಡಿಗಳನ್ನು ಉಚ್ಚರಿಸಿರುವುದು ನೇರವಾಗಿ ಬಸವ ಭಕ್ತರ ಮಾನಹಾನಿಗೆ ಕಾರಣವಾಗಿದೆಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಹಿಂದೆಯು ಸ್ವಾಮೀಜಿಯವರು ಬಸವ ಭಕ್ತರನ್ನು ತಾಲಿಬಾನಿಗಳು ಎಂದು ಅವಹೇಳನಾತ್ಮಕ ಹೇಳಿಕೆ ನೀಡಿದ್ದರೂ, ಯಾವುದೇ ಕ್ರಮ ಕೈಗೊಳ್ಳದಿರುವುದರಿಂದ ಇಂತಹ ಘಟನೆಗಳು ಮರುಕಳಿಸುತ್ತಿವೆಂದು ಪ್ರತಿಭಟನಾಕಾರರು ವಿಷಾದ ವ್ಯಕ್ತಪಡಿಸಿದರು. ಆದರಿಂದ ಕೂಡಲೇ ಕಾನೂನು ಕ್ರಮ ಕೈಗೊಂಡು, ಕರ್ನಾಟಕಕ್ಕೆ ಪ್ರವೇಶಿಸಿ ಪ್ರಚೋದನಾತ್ಮಕ ವಾತಾವರಣ ಸೃಷ್ಟಿಸುವುದನ್ನು ತಡೆಯಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಮಹಾಸಭಾದ ಜಿಲ್ಲಾಧ್ಯಕ್ಷ ಪಿ.ರುದ್ರಪ್ಪ, ಬಸವಕೇಂದ್ರದ ಗೌರವಾಧ್ಯಕ್ಷ ಹರವಿ ನಾಗನಗೌಡ, ಹಿಂದುಳಿದ ವರ್ಗಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಕೆ.ಶಾಂತಪ್ಪ, ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಚಂದ್ರಶೇಖರ ಪಾಟೀಲ್ ಮಿರ್ಜಾಪೂರ, ಚುಕ್ಕಿ ಸೂಗಪ್ಪ ಸಾಹುಕಾರ, ತಾಲೂಕಾಧ್ಯಕ್ಷ ಜೆ.ಬಸವರಾಜ, ಉಪಾಧ್ಯಕ್ಷ ಚನ್ನಬಸವಣ್ಣ, ದಲಿತ ಸಂಘದ ಮುಖಂಡ ಎಂ.ವಿರುಪಾಕ್ಷಿ, ಹರವಿ ಶಂಕರಗೌಡ ಸೇರಿ ಅನೇಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net