

ನರೇಗಲ್ಲ: ಬಡ್ಡಿಗೆ ಹಣ ನೀಡಿದವರ ಕಾಟಕ್ಕೆ ಬೇಸತ್ತು ಪಟ್ಟಣದ ಅನೇಕ ಯುವಕರು ಆತ್ಮಹತ್ಯೆ ಮಾಡಿಕೊಂಡಿರುವುದು ಕಳವಳಕಾರಿ ಸಂಗತಿ. ಇದನ್ನು ತಡೆಯಲು ಎಲ್ಲರೂ ಶ್ರಮಿಸಬೇಕು. ಇದಕ್ಕೆ ಪೊಲೀಸ್ ಇಲಾಖೆಯ ಸಹಕಾರವೂ ಬೇಕು ಎಂದು ನರೇಗಲ್ಲ ಪಟ್ಟಣ ಅಭಿವೃದ್ಧಿ ಸಮಿತಿ ಅಧ್ಯಕ್ಷ ಶಿವನಗೌಡ ಪಾಟೀಲ ಹೇಳಿದರು.
ನರೇಗಲ್ಲ ಪಟ್ಟಣ ಅಭಿವೃದ್ಧಿ ಸಮಿತಿಯಿಂದ ಪಟ್ಟಣದ ಕಲ್ಮೇಶ್ವರ ದೇವಸ್ಥಾನದ ಆವರಣದಲ್ಲಿ ಊರಿನಲ್ಲಿ ಹೆಚ್ಚುತ್ತಿರುವ ತರುಣರ ಆತ್ಮಹತ್ಯೆ ಪ್ರಕರಣ, ಕುಟುಂಬ ವ್ಯವಸ್ಥೆ, ದುಡಿಯುವ ಸಂಸ್ಕೃತಿಯ ಕುರಿತು ರ್ಚಚಿಸಲು ಇತ್ತೀಚೆಗೆ ಕರೆದಿದ್ದ ಸಭೆಯಲ್ಲಿ ಅವರು ಮಾತನಾಡಿದರು.
ಬಡ್ಡಿ ವ್ಯವಹಾರದ ಕಿರುಕುಳದಿಂದಾಗಿ ಪಟ್ಟಣದ 30ಕ್ಕೂ ಹೆಚ್ಚು ಯುವಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಗತ್ಯಕ್ಕಾಗಿ ಹಣ ಪಡೆಯುವ ಯುವಕರ ಮೇಲೆ ದಿನದ ಬಡ್ಡಿ, ಚಕ್ರಬಡ್ಡಿ, ವಾರದ ಬಡ್ಡಿ, ತಿಂಗಳ ಬಡ್ಡಿ ಎಂದು ಅತಿರೇಕದ ಒತ್ತಡ ಹಾಕಿ ದೈಹಿಕ ಹಾಗೂ ಮಾನಸಿಕ ಹಲ್ಲೆಗಳನ್ನು ಮಾಡುತ್ತಾರೆ. ಮನೆವರೆಗೆ ಬಂದು ಭಯ ಹುಟ್ಟಿಸುತ್ತಾರೆ. ಕೆಲವೊಮ್ಮೆ ಮನೆಯ ಮಹಿಳೆಯರ ಮೇಲೆಯೂ ಬೆದರಿಕೆ ಹಾಕುತ್ತಾರೆ. ಹೀಗಾಗಿ ಮರ್ಯಾದೆಗೆ ಹೆದರಿ ತರುಣರು ತಮ್ಮ ಜೀವನವನ್ನು ಕಳೆದುಕೊಳ್ಳುತ್ತಿದ್ದಾರೆ. ಹಣ ನೀಡಿದ ಬಲಾಢ್ಯರ ವಿರುದ್ಧ ಹೋರಾಡಲಾಗದೆ ಪೊಲೀಸ್ ಸ್ಟೇಷನ್ನಲ್ಲಿ ಪ್ರಕರಣಗಳನ್ನು ದಾಖಲಿಸುತ್ತಿಲ್ಲ. ಇದಕ್ಕೆ ಕಡಿವಾಣ ಹಾಕಲು ಎಲ್ಲ ಸಮಾಜದ ಹಿರಿಯರು ಪಟ್ಟಣ ಅಭಿವೃದ್ಧಿ ಸಮಿತಿ ಮೂಲಕ ಮುಂದಾಗಿದ್ದೇವೆ. ಸದ್ಯದಲ್ಲಿಯೇ ಎಸ್ಪಿ್ಪುವರಿಗೆ ಸಮಿತಿ ಮೂಲಕ ಭೇಟಿಯಾಗಿ ಬಡ್ಡಿ ವ್ಯವಹಾರಕ್ಕೆ ಕಡಿವಾಣ ಹಾಕುವಂತೆ ಹಾಗೂ ಸಾವು ಸಂಭವಿಸಿದ ಯುವಕರ ಕುರಿತು ತನಿಖೆ ಕೈಗೊಳ್ಳುವಂತೆ ಮನವಿ ಸಲ್ಲಿಸಲಾಗುತ್ತದೆ ಎಂದರು.
ರೈತ ಸಮೃದ್ಧಿ ಕೇಂದ್ರದ ಅಧ್ಯಕ್ಷ ಜಗದೀಶ ಸಂಕನಗೌಡ್ರ ಹಾಗೂ ಗುರುರಾಜ ಕುಲಕರ್ಣಿ ಮಾತನಾಡಿ, ಮಕ್ಕಳಿಗೆ ನೈತಿಕ ಶಿಕ್ಷಣ, ಧರ್ಮ ಸಂಸ್ಕೃತಿಯ ತಿಳಿವಳಿಕೆ ನೀಡಲು ಮುಂದಾಗಬೇಕು. ಅದಕ್ಕಾಗಿ ಪ್ರತಿ ಶಾಲೆ, ಓಣಿಗೆ ಹೋಗಿ ನೈತಿಕ ಮೌಲ್ಯಗಳನ್ನು ತುಂಬುವ ಕೆಲಸ ಮಾಡಬೇಕು ಎಂದರು.
ಅಶೋಕ ಬೇವಿನಕಟ್ಟಿ, ಶರಣಪ್ಪ ಧರ್ವಯತ, ಚನ್ನಬಸಪ್ಪ ಕುಷ್ಟ್ಟಗಿ, ಕಳಕನಗೌಡ ಪೊಲೀಸ್ಪಾಟೀಲ, ಮುತ್ತಣ್ಣ ಮಾವಿನಕಾಯಿ, ಎ.ಎ. ನವಲಗುಂದ, ಈರಪ್ಪ ಕಳಕೊಣ್ಣರ, ಕೆ.ಎಸ್. ಹಡಪದ, ಶಂಶುದ್ದೀನ್ ಕುಂದಗೋಳ, ಗಂಗಾಧರ ಬಡಿಗೇರ, ಶರಣಪ್ಪ ಬಡಿಗೇರ, ಕಲ್ಲಪ್ಪ ಗಂಗರಗೊಂಡ, ಚಂದ್ರು ಹೊನವಾಡ, ಎಸ್.ಎ. ಜಕ್ಕಲಿ, ದಾದುಸಾಬ್ ನದಾಫ್, ಸಿ.ವಿ. ವಂಕಲಕುಂಟಿ, ಮಲ್ಲಿಕಾರ್ಜುನ ಮಲ್ಲನಗೌಡ್ರ, ಬಾಳಪ್ಪ ಸೋಮಗೊಂಡ, ಸಂಗನಗೌಡ ಮಾಲಿಪಾಟೀಲ, ಇತರರಿದ್ದರು.