

ಅಂಕೋಲಾ: ಅರಣ್ಯ ಹಕ್ಕು ಕಾಯ್ದೆ ಅಡಿಯಲ್ಲಿ ಸಲ್ಲಿಸಿದ ಅರ್ಜಿಗಳ ಪರಿಶೀಲನೆ ತಡೆ ಹಿಡಿಯಲು ಕೋರಿ ಕರ್ನಾಟಕ ಪ್ರಾಂತ ರೈತ ಸಂಘ ಅಂಕೋಲಾ ಸಮಿತಿಯವರು ಗುರುವಾರ ಇಲ್ಲಿನ ತಹಸೀಲ್ದಾರ್ ಕಚೇರಿಯ ಆವರಣದಲ್ಲಿ ಕುಮಟಾ ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದರು.
ಅನುಸೂಚಿತ ಬುಡಕಟ್ಟುಗಳು ಮತ್ತು ಇತರ ಪಾರಂಪರಿಕ ಅರಣ್ಯವಾಸಿಗಳ (ಅರಣ್ಯ ಹಕ್ಕುಗಳನ್ನು ಮಾನ್ಯತೆ ಮಾಡುವ) ಅಧಿನಿಯಮ 2006 ಮತ್ತು ನಿಯಮಗಳು 2008 (ನಿಯಮಗಳ ತಿದ್ದುಪಡಿ 2012) ಅಡಿಯಲ್ಲಿ ಅರ್ಜಿಗಳನ್ನು ಪರಿಶೀಲಿಸುವ ಕುರಿತು ಅರ್ಜಿದಾರರಿಗೆ 3 ತಲೆಮಾರಿನ ಪೂರ್ವದಿಂದ ಅಂದರೆ 1930 ಕ್ಕೂ ಪೂರ್ವದ ದಾಖಲೆಗಳನ್ನು ತರಲು ತಿಳಿಸಲಾಗಿದೆ. ಬಡ ಅರಣ್ಯ ಅತಿಕ್ರಮಣದಾರರಿಂದ ಬ್ರಿಟಿಷ್ ಸರ್ಕಾರ ಇದ್ದಾಗಿನ ದಾಖಲೆ ಒದಗಿಸಲು ಸಾಧ್ಯವಾಗುವುದಿಲ್ಲ. ಅಲ್ಲದೆ, ಯಾವುದೇ ಜನಪ್ರತಿನಿಧಿಗಳು ಇಲ್ಲದೆ ಅರ್ಜಿಗಳನ್ನು ಪರಿಶೀಲಿಸುವುದು ಮತ್ತು ಹೊಸ ಹೊಸ ಮಾನದಂಡಗಳನ್ನು ತರಲು ಹೇಳುವುದನ್ನು ಒಪ್ಪಲು ಸಾಧ್ಯವಿಲ್ಲ.
ಗ್ರಾಮ ಅರಣ್ಯ ಹಕ್ಕು ಸಮಿತಿಗಳು ಅನುಮೋದಿಸಿರುವ ಬಡ ರೈತರ ಅರ್ಜಿಗಳನ್ನು ಯಾವುದೇ ಷರತ್ತು ಇಲ್ಲದೆ ಅನುಮೋದಿಸಬೇಕು. ಹಕ್ಕು ಪತ್ರ ನೀಡಬೇಕು. ಅದು ಬಿಟ್ಟು ಪದೇ ಪದೆ ಮೂರು ತಲೆಮಾರಿನ ಹಿಂದಿನ ದಾಖಲೆ ಕೇಳಿ ಅನಾವಶ್ಯಕ ವೆಚ್ಚ ಮತ್ತು ಸಮಯ ಹಾಳು ಮಾಡುತ್ತಿರುವುದು ಸರಿಯಲ್ಲ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಬೇಡಿಕೆ: ಮೂರು ತಲೆಮಾರು ಅಥವಾ 75 ವರ್ಷ ಮಾನದಂಡ ವಾಪಸ್ ಪಡೆಯಬೇಕು. 2006 ರವರೆಗಿನ ಎಲ್ಲ ಅತಿಕ್ರಮಣದಾರರ ಅರ್ಜಿಗಳನ್ನು ಮಾನ್ಯ ಮಾಡಬೇಕು. ಈ ಬಗ್ಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ವಿನಾಯಿತಿ ಕೋರಿ ಪತ್ರ ಬರೆದಿದ್ದು, ಅದನ್ನು ಪರಿಗಣಿಸಿ ಅರ್ಜಿ ತೀರ್ಮಾನ ಮಾಡಬೇಕು. ಜನಪ್ರತಿನಿಧಿಗಳಿಲ್ಲದೆ ಅರ್ಜಿ ಪರಿಶೀಲನೆ ಸರಿ ಅಲ್ಲ. ಗ್ರಾಮ ಅರಣ್ಯ ಹಕ್ಕು ಸಮಿತಿ ಒಪ್ಪಿಗೆ ಸೂಚಿಸಿರುವ ಅರ್ಜಿಗಳಿಗೆ ಹಕ್ಕುಪತ್ರ ನೀಡುವುದು. ಪರಿಶೀಲನಾ ಪ್ರಕ್ರಿಯೆಯನ್ನು ತಡೆಹಿಡಿಯುವುದು.
ಎಸಿ ಕಲ್ಯಾಣಿ ಕಾಂಬಳೆ ಮನವಿ ಸ್ವೀಕರಿಸಿದರು. ರೈತ ಸಂಘದ ಜಿಲ್ಲಾಧ್ಯಕ್ಷ ಶಾಂತಾರಾಮ ನಾಯಕ ಅಗಸೂರು, ತಾಲೂಕು ಅಧ್ಯಕ್ಷ ಗೌರೀಶ ನಾಯಕ, ಜಿಪಂ ಮಾಜಿ ಸದಸ್ಯ ಜಿ.ಎಂ. ಶೆಟ್ಟಿ ಅಚವೆ, ಅಗಸೂರು ಗ್ರಾಪಂ ಮಾಜಿ ಅಧ್ಯಕ್ಷ ರಾಮಚಂದ್ರ ಡಿ.ನಾಯ್ಕ, ಪ್ರಮುಖರಾದ ರಮಾನಂದ ನಾಯಕ, ಸಂತೋಷ ನಾಯ್ಕ, ವಿಜು ಪಿಳ್ಳೆ, ಮಾದೇವ ಗೌಡ, ಅತಿಕ್ರಮಣದಾರರು ಉಪಸ್ಥಿತರಿದ್ದರು.