

ಹನೂರು : ಕಾಡುಪ್ರಾಣಿಗಳ ಹಾವಳಿ ತಡೆಗಟ್ಟುವಂತೆ ಒತ್ತಾಯಿಸಿ ಗುರುವಾರ ಬೈಲೂರು ವ್ಯಾಪ್ತಿಯ ವಿವಿಧ ಗ್ರಾಮದ ರೈತರು ವಲಯ ಅರಣ್ಯಾಧಿಕಾರಿ ಪ್ರಮೋದ್ ಅವರಿಗೆ ಮನವಿ ಮಾಡಿದರು.
ಕಚೇರಿಗೆ ತೆರಳಿ ಮನವಿ ಸಲ್ಲಿಸಿದ ರೈತರು ಮಾತನಾಡಿ, ಬೈಲೂರು ವ್ಯಾಪ್ತಿಯ ಹುಣಸೆಪಾಳ್ಯ, ಅಂಡೇಕುರುಬರ ದೊಡ್ಡಿ, ಮುನಿಗುಡಿ ದೊಡ್ಡಿ, ಕೆರೆದೊಡ್ಡಿ, ಶಂಭಪ್ಪನದೊಡ್ಡಿ, ಅಟ್ಟುಗೌಡನ ಪಾಳ್ಯ, ಬೈಲೂರು, ಕರಿಯಪ್ಪನ ದೊಡ್ಡಿ ಹಾಗೂ ಹೊಸಪಾಳ್ಯ ಗ್ರಾಮಗಳಲ್ಲಿ ಹಲವು ದಿನಗಳಿಂದ ಕಾಡಾನೆ ಹಾಗೂ ಹಂದಿಗಳು ಜಮೀನಿಗೆ ಲಗ್ಗೆ ಇಟ್ಟು ಮುಸುಕಿನ ಜೋಳ, ಆಲೂಗಡ್ಡೆ, ಬೆಳ್ಳುಳ್ಳಿ ಫಸಲನ್ನು ನಾಶಪಡಿಸುತ್ತಿವೆ. ಅಲ್ಲದೇ ತೆಂಗು, ಬಾಳೆ ಹಾಗೂ ಕೃಷಿ ಪರಿಕರಗಳನ್ನು ಹಾನಿಗೊಳಿಸುತ್ತಿವೆ. ಇದರಿಂದ ಕೃಷಿಯಲ್ಲಿ ನಷ್ಟ ಅನುಭವಿಸುವಂತಾಗಿದೆ. ಇತ್ತ ಕಾಡಾನೆಗಳು ಮನೆ ಸಮೀಪವೇ ಬರುತ್ತಿದ್ದು, ಜೀವಭಯ ಕಾಡುತ್ತಿದೆ. ಕಾಡಾನೆಗಳ ಹಾವಳಿಯಿಂದ ರಾತ್ರಿ ವೇಳೆ ಜಮೀನಿಗೆ ಕಾವಲು ಕಾಯಲು ಭಯವಾಗುತ್ತಿದೆ. ಕಾಡು ಪ್ರಾಣಿಗಳನ್ನು ತಡೆಗಟ್ಟುವಂತೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಒಂದು ವೇಳೆ ಕಾಡಾನೆಯಿಂದ ಮೃತಪಟ್ಟರೆ ಯಾರು ಹೊಣೆ? ಆದ್ದರಿಂದ ಇನ್ನು ಮುಂದಾದರೂ ಇತ್ತ ಗಮನಹರಿಸಿ ಕಾಡು ಪ್ರಾಣಿಗಳ ಹಾವಳಿ ತಡೆಗಟ್ಟುವಂತೆ ಒತ್ತಾಯಿಸಿದರು. ಆರ್‌ಎಫ್‌ಒ ಪ್ರಮೋದ್ ಪ್ರತಿಕ್ರಿಯಿಸಿ, ಗುಂಡಿಮಾಳದ ರಸ್ತೆಯ ಮೂಲಕ ಕಾಡಾನೆಗಳು ಆಗಮಿಸುತ್ತಿವೆ ಹಾಗಾಗಿ ಈ ಮಾರ್ಗದ ಗೇಟ್ ಬಂದ್ ಮಾಡಲಾಗುವುದು. ಜತೆಗೆ ಹೆಚ್ಚಿನ ಸಿಬ್ಬಂದಿ ನಿಯೋಜಿಸಿ ಕಾಡು ಪ್ರಾಣಿಗಳು ಗ್ರಾಮ ಹಾಗೂ ಜಮೀನಿನತ್ತ ಲಗ್ಗೆ ಇಡದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮವಹಿಸುವುದಾಗಿ ಭರವಸೆ ನೀಡಿದರು.