ಬೀದಿ ನಾಯಿಗಳ ಹಾವಳಿಗೆ ತಡೆಗೆ ಆಗ್ರಹ

ಅರಸೀಕೆರೆಯಲ್ಲಿ ಬೀದಿ ನಾಯಿಗಳ ಹಾವಳಿ ನಿಯಮತ್ರಣಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು. ರಾಘವೇಂದ್ರ, ಪ್ರಕಾಶ್, ಆನಂದ, ರತ್ನಮ್ಮ, ಅನಿತಾ ಇತರರು ಇದ್ದರು.
ಅರಸೀಕೆರೆಯಲ್ಲಿ ಬೀದಿ ನಾಯಿಗಳ ಹಾವಳಿ ನಿಯಮತ್ರಣಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು. ರಾಘವೇಂದ್ರ, ಪ್ರಕಾಶ್, ಆನಂದ, ರತ್ನಮ್ಮ, ಅನಿತಾ ಇತರರು ಇದ್ದರು.
Published on

ಅರಸೀಕೆರೆ: ನಗರ ನಿವಾಸಿಗಳಿಗೆ ಕಂಟಕ ತಂದೊಡ್ಡಿರುವ ಬೀದಿ ನಾಯಿಗಳ ನಿಯಂತ್ರಣಕ್ಕೆ ನಗರಸಭೆ ಆಡಳಿತ ತಕ್ಷಣವೇ ಮುಂದಾಗಬೇಕು ಎಂದು ಒತ್ತಾಯಿಸಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ನಗರದ ಬಸವೇಶ್ವರ ವೃತ್ತದಿಂದ ನಗರಸಭೆ ಕಚೇರಿವರೆಗೂ ತಮಟೆ ಚಳವಳಿ ನಡೆಸಿದ ಪ್ರತಿಭಟನಾನಿರತರು ಕೂಡಲೇ ಬೀದಿ ನಾಯಿಗಳ ಉಪಟಳಕ್ಕೆ ಕಡಿವಾಣ ಹಾಕಿ ಅಮಾಯಕರ ಜೀವ ರಕ್ಷಿಸಿ ಎಂದು ಘೋಷಣೆ ಕೂಗಿದರು.

ಸಾಮಾಜಿಕ ಕಾರ್ಯಕರ್ತ ರಾಘವೇಂದ್ರ ಮಾತನಾಡಿ, ನಗರದ ಬಹುತೇಕ ವಾರ್ಡ್‌ಗಳಲ್ಲಿ ಬೀದಿ ನಾಯಿಗಳ ಹಾವಳಿ ಮೇರೆ ಮೀರಿದೆ. ಮಕ್ಕಳು, ವಯೋವೃದ್ಧರು, ಮಹಿಳೆಯರು ಭಯಭೀತರಾಗಿದ್ದು, ಮನೆಯಿಂದ ಹೊರಬರಲು ಸಾಧ್ಯವಿಲ್ಲ ಎನ್ನುವಂತಾಗಿದೆ. ಮೇಲೆರಗಿ ಕಚ್ಚಿ ಗಾಯಗೊಳಿಸಿ ಜೀವಕ್ಕೂ ಕುತ್ತು ತರುವ ಅಪಾಯ ಮನೆ ಮಾಡಿದೆ. ಪರಿಸ್ಥಿತಿ ಹೀಗಿದ್ದರೂ ನಗರಸಭೆ ಆಡಳಿತ ಜಾಣ ಕುರುಡು ಪ್ರದರ್ಶಿಸುತ್ತಿದೆ. ಬೀದಿ ನಾಯಿ ದಾಳಿಯಿಂದ ಮೃತಪಟ್ಟ ಕುಟುಂಬಕ್ಕೆ 50 ಲಕ್ಷ ರೂ. ನೀಡಬೇಕು. ಗಾಯಗೊಂಡವರಿಗೆ ಉಚಿತ ಚಿಕಿತ್ಸೆ ಜತೆಗೆ 50 ಸಾವಿರ ರೂ. ವೆಚ್ಚವನ್ನು ನಗರಸಭೆ ನೀಡಬೇಕು ಎಂದು ಆಗ್ರಹಿಸಿದರು.

ಮುಖಂಡ ಆನಂದ್ ಮಾತನಾಡಿ, ಬೀದಿ ನಾಯಿಗಳಿಗೆ ಬಿಸ್ಕೆಟ್ ಹಾಕಿ ಸಲಹುವವರ ಮೇಲೆ ಪ್ರಕರಣ ದಾಖಲಿಸಬೇಕು. ನಾಗರಿಕರು ಮನೆಯಲ್ಲಿ ನಾಯಿ ಸಾಕಲು ನಗರಸಭೆಯಿಂದ ಅನುಮತಿ ಕಡ್ಡಾಯ ಮಾಡುವ ಅಗತ್ಯವಿದೆ. ಗೋಶಾಲೆ ಮಾದರಿಯಲ್ಲಿ ಶ್ವಾನ ಪಾರ್ಕ್ ಆರಂಭಿಸಬೇಕು. ಗಾಯಗೊಂಡ ಜಾನುವಾರುಗಳಿಗೂ ಪರಿಹಾರ ನೀಡಬೇಕು ಎಂದರು. ರತ್ನಮ್ಮ, ಪ್ರಕಾಶ್,ಅನಿತಾ, ಕುಮಾರ್ ಇತರರು ನೇತೃತ್ವ ವಹಿಸಿದ್ದರು. ಪೌರಾಯುಕ್ತ ಎಚ್. ಟಿ.ಕೃಷ್ಣಮೂರ್ತಿ ಅವರಿಗೆ ಮನವಿ ಸಲ್ಲಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net