

ಮಂಡ್ಯ: ಮಂಡ್ಯ ವಿಶ್ವವಿದ್ಯಾನಿಲಯದಲ್ಲಿ ಎಂಬಿಎ ಮತ್ತು ಎಂಸಿಎ ಸ್ನಾತಕೋತ್ತರ ವಿಭಾಗ ತೆರೆಯುವುದರ ಜತೆಗೆ ರಾಜಮಾತೆ ಕೆಂಪನಂಜಮ್ಮಣಿ ಅವರ ಹೆಸರಿಡಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ(ಶಿವರಾಮೇಗೌಡ ಬಣ) ಕಾರ್ಯಕರ್ತರು ಮನವಿ ಸಲ್ಲಿಸಿದರು.
ವಿವಿಗೆ ತೆರಳಿದ ಕಾರ್ಯಕರ್ತರು ಕುಲಪತಿ ಪ್ರೊ.ಕೆ.ಶಿವಚಿತ್ತಪ್ಪ ಅವರಿಗೆ ಮನವಿ ಸಲ್ಲಿಸಿದರು. ಮಂಡ್ಯ ವಿವಿ ಪದವಿ ಹಾಗೂ ಸ್ನಾತಕೋತ್ತರ ಪದವಿಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಿ ಪ್ರಸ್ತುತ ಪ್ರಪಂಚಕ್ಕೆ ಕೌಶಲಾಧಾರಿತ ಪದವೀಧರರನ್ನು ನೀಡುತ್ತಾ ಬರುತ್ತಿರುವುದು ಶ್ಲಾಘನೀಯ. ಆದರೆ ಎಂಬಿಎ ಮತ್ತು ಎಂಸಿಎ ಸ್ನಾತಕೋತ್ತರ ಪದವಿ ತರಗತಿ ಲಭ್ಯವಿಲ್ಲದೆ ಬೆಂಗಳೂರು, ಮೈಸೂರಿಗೆ ತೆರಳಬೇಕಿದೆ. ಅದಲ್ಲದೆ ಅಲ್ಲಿಗೆ ಲಕ್ಷಾಂತರ ರೂ ಶುಲ್ಕ ಕೊಡಬೇಕಿದೆ. ಆದ್ದರಿಂದ 2024-25ನೇ ಸಾಲಿಗೆ ಪ್ರಾರಂಭವಾಗುವಂತೆ ಮಂಡ್ಯ ವಿಶ್ವವಿದ್ಯಾಲಯದಲ್ಲಿ ಎಂಬಿಎ ಮತ್ತು ಎಂಸಿಎ ಸ್ನಾತಕೋತ್ತರ ಪದವಿ ತರಗತಿ ಆರಂಭಿಸಬೇಕೆಂದು ಒತ್ತಾಯಿಸಿದರು.
ಹಾಗೆಯೇ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ತಾಯಿ ಕೆಂಪ ನಂಜಮ್ಮಣಿ ಅವರು ಮೈಸೂರು ಸಂಸ್ಥಾನದ ಅಭಿವೃದ್ಧಿಗೆ ಕೊಡುಗೆ ನೀಡಿದ್ದಾರೆ. ಮಹಿಳಾ ಸಮಾನತೆ ಮತ್ತು ಸಾಧಕಿಯಾಗಿರುವುದರಿಂದ ಕೆಂಪನಂಜಮ್ಮಣ್ಣಿ ಅವರ ಹೆಸರನ್ನು ಮಂಡ್ಯ ವಿಶ್ವವಿದ್ಯಾಲಯಕ್ಕೆ ನಾಮಕರಣ ಮಾಡಬೇಕೆಂದು ಆಗ್ರಹಿಸಿದರು. ಕರವೇ ಜಿಲ್ಲಾಧ್ಯಕ್ಷ ಎಚ್.ಡಿ.ಜಯರಾಂ, ಶಿವರಾಮೇಗೌಡ, ಮಂಚಶೆಟ್ಟಿ, ಪಲ್ಲವಿ, ಮನು ಇತರರಿದ್ದರು.