ತುರ್ತು ಚಿಕಿತ್ಸಾ ಘಟಕ ಆರಂಭಕ್ಕೆ ಆಗ್ರಹ : ಸುಬ್ರಹ್ಮಣ್ಯ ಗ್ರಾಮ ಸಭೆ : ವೈದ್ಯರ ನೇಮಕಕ್ಕೆ ಒತ್ತಾಯ

sabhe
ಸುಬ್ರಹ್ಮಣ್ಯ ಗ್ರಾಮಸಭೆ ಪಂಚಾಯಿತಿ ಅಧ್ಯಕ್ಷೆ ಸುಜಾತಾ ಕಲ್ಲಾಜೆ ಅಧ್ಯಕ್ಷತೆ ನಡೆಯಿತು.
Published on

ಸುಬ್ರಹ್ಮಣ್ಯ: ಸುಬ್ರಹ್ಮಣ್ಯದ ಕಾಶಿಕಟ್ಟೆ ಬಳಿ ಈ ಹಿಂದೆ ಇಲಾಖೆಯಿಂದ ಮಂಜೂರಾದ ತುರ್ತು ಚಿಕಿತ್ಸಾ ಘಟಕವನ್ನು ಸದ್ದಿಲ್ಲದೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸ್ಥಳಾಂತರಿಸಿದರ ಬಗ್ಗೆ ವ್ಯಾಪಕಕ್ಕೆ ಚರ್ಚೆ ನಡೆಯಿತು. ಅಲ್ಲದೆ ಕೂಡಲೇ 24*7 ತುರ್ತು ಚಿಕಿತ್ಸಾ ಘಟಕ ಸುಬ್ರಹ್ಮಣ್ಯದಲ್ಲಿ ಆರಂಭಿಸಬೇಕು. ಇಲ್ಲಿಗೆ 24 ತಾಸು ವೈದ್ಯರನ್ನು ನೇಮಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.

ಸುಬ್ರಹ್ಮಣ್ಯ ಗ್ರಾಪಂ ಗ್ರಾಮಸಭೆ ಸೋಮವಾರ ಜರುಗಿತು. ಪಂಚಾಯಿತಿ ಅಧ್ಯಕ್ಷೆ ಸುಜಾತಾ ಕಲ್ಲಾಜೆ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ವೆಂಕಟೇಶ ಎಚ್.ಎಲ್., ನೋಡಲ್ ಅಧಿಕಾರಿ ಕಡಬ ತಾಪಂ ಸಹಾಯಕ ನಿರ್ದೇಶಕ ಚೆನ್ನಪ್ಪ ಗೌಡ ಕಜೆಮೂಲೆ, ಸುಬ್ರಹ್ಮಣ್ಯ ಗ್ರಾಪಂ ಅಭಿವೃದ್ಧಿ ಅಧಿಕಾರಿ ಮಹೇಶ್, ಕಾರ್ಯದರ್ಶಿ ಮೋನಪ್ಪ ಡಿ ಹಾಗೂ ಸದಸ್ಯರು ಉಪಸ್ಥಿತರಿದ್ದರು.

ಸುಬ್ರಹ್ಮಣ್ಯದಲ್ಲಿ ಅನಧಿಕೃತವಾಗಿ ಅಂಗಡಿ ನಡೆಸುತ್ತಿರುವರಿಗೆ ನೋಟಿಸ್ ನೀಡಿ ಕಾರ್ಯಾಚರಣೆ ಮೂಲಕ ತೆರವುಗೊಳಿಸಬೇಕು. ರಸ್ತೆಗೆ ತಾಗಿಕೊಂಡು ಕಾಂಪೌಂಡು ಬಹಳಷ್ಟು ಕಡೆ ನಿರ್ಮಿಸಲಾಗಿದೆ. ಅವರಿಗೆ ನೋಟಿಸ್ ನೀಡಿ ತೆರವುಗೊಳಿಸಲು ಆದೇಶಿಸಬೇಕು. ಇನ್ನು ಮುಂದೆ ಕಾಂಪೌಂಡ್ ರಸ್ತೆ ಬದಿ ಕಟ್ಟದಂತೆ ನಿಗಾ ವಹಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದರು.

ಸುಬ್ರಹ್ಮಣ್ಯ ದೇವಳದ ವತಿಯಿಂದ ಐನೆಕಿದುವಿನಲ್ಲಿ ಗೋಶಾಲೆ ನಿರ್ಮಿಸುವ ಬಗ್ಗೆ ಕ್ರಮ ಕೈಗೊಳ್ಳಬೇಕು. ಮೆಸ್ಕಾಂ ಹಾಗೂ ಅರಣ್ಯ ಇಲಾಖೆ ಪರಸ್ಪರ ಹೊಂದಾಣಿಕೆ ಮಾಡಿಕೊಂಡು ರಸ್ತೆಯ ಬದಿ ಇರುವ ವಿದ್ಯುತ್ ಲೈನಿಗೆ ತಾಗುವ ರೆಂಬೆಗಳನ್ನು ಕಡಿಯಬೇಕು. ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಗುಣಮಟ್ಟದ ವಿದ್ಯುತ್ತನ್ನು ಸರಬರಾಜು ಮಾಡಲು ಕಡಬ ಹಾಗೂ ಗುತ್ತಿಗಾರಿನಿಂದ ಭೂಗತ ಕೇಬಲ್ ಹಾಗೂ ಮೇಲ್ಗಡೆ ಕೇಬಲ್ ಬಂದಿರುವ ಲೈನ್‌ಗಳನ್ನು ಸರಿಯಾಗಿ ಕೆಲಸ ಮಾಡುವಂತೆ ಮೆಸ್ಕಾಂ ನೋಡಿಕೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು. ಕಂದಾಯ, ಅರಣ್ಯ, ಪಶು ಸಂಗೋಪನಾ, ಮೆಸ್ಕಾಂ, ಶಿಶು ಯೋಜನಾ ಅಭಿವೃದ್ಧಿ, ಲೋಕೋಪಯೋಗಿ, ಜಿಪಂ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆ ಅಧಿಕಾರಿಗಳ, ಕುಕ್ಕೆ ದೇವಸ್ಥಾನ ಅಧಿಕಾರಿ, ಸಿಬ್ಬಂದಿ ಉಪಸ್ಥಿತರಿದ್ದು ಸಂಬಂಧಪಟ್ಟ ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net