

ಮಂಡ್ಯ: ಮಿಮ್ಸ್‌ನಲ್ಲಿ ಮುಚ್ಚಿರುವ ಕ್ಯಾನ್ಸರ್ ಚಿಕಿತ್ಸಾ ಕೇಂದ್ರ ಪ್ರಾರಂಭಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಪ್ರಗತಿಪರ ಮುಖಂಡರು ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.
ಕ್ಯಾನ್ಸರ್ ಕೇಂದ್ರವನ್ನು ಸುಸಜ್ಜಿತಗೊಳಿಸಿ ಜನರ ಚಿಕಿತ್ಸೆಗೆ ನೆರವಾಗಬೇಕು. ಕಿಡ್ನಿ ಸಮಸ್ಯೆಗೆ ಸಂಬಂದಿಸಿದಂತೆ ಪ್ರತ್ಯೇಕ ಘಟಕ ನಿರ್ಮಾಣ ಮಾಡಿ, ಬಡ ಜನರಿಗೆ ಕೈಗೆಟಕುವ ದರದಲ್ಲಿ ಚಿಕಿತ್ಸೆ ದೊರೆಯುವಂತಾಗಬೇಕು. ಗರ್ಭಿಣಿಯರ ಹೆರಿಗೆ ವಾರ್ಡ್‌ಗಳು ಮತ್ತು ಬಾಣಂತಿಯರ ಆರೈಕೆ ವಾರ್ಡ್‌ಗಳನ್ನು ಮತ್ತಷ್ಟು ಸುಸಜ್ಜಿತಗೊಳಸಬೇಕು. ಶುಚಿತ್ವ ಮತ್ತು ಸೌಲಭ್ಯ ದೊರೆಯುಂವತಾಗಬೇಕು ಎಂದು ಒತ್ತಾಯಿಸಿದರು.
ಸರ್ವೋಚ್ಚ ನ್ಯಾಯಾಲಯದ ಉದ್ದೇಶಿತ ದಕ್ಷಿಣದ ನ್ಯಾಯ ಪೀಠವನ್ನು ಕರ್ನಾಟಕದಲ್ಲಿ ಅದರಲ್ಲೂ ಮಂಡ್ಯದಲ್ಲಿ ಸ್ಥಾಪಿಸಲು ಬಲವಾದ ಹಕ್ಕೊತ್ತಾಯವನ್ನು ಕೇಂದ್ರದ ಮುಂದಿಡಬೇಕು. ಅಂತೆಯೇ ಮಂಡ್ಯದ ಸರ್ವತೋಮುಖ ಬೆಳವಣಿಗೆಗೆ ಮಂಡ್ಯದಲ್ಲಿ ಸರ್ಕಾರಿ ಕಾನೂನು ಕಾಲೇಜು ಮತ್ತು ಸರ್ಕಾರಿ ಐಟಿಐ ಕಾಲೇಜನ್ನು ತರೆಯಲು ಸೂಕ್ತ ಕಾರ್ಯ ಯೋಜನೆ ರೂಪಿಸಿ, ಅನುಷ್ಠಾನಗೊಳಿಸಬೇಕು. ಮಂಡ್ಯದಲ್ಲಿ ಅತಿ ಹೆಚ್ಚು ರೈತಾಪಿ ಕುಟುಂಬದ ಮತ್ತು ಕೂಲಿ ಕಾರ್ಮಿಕರ ಹಾಗೂ ಶ್ರಮಿಕ ವರ್ಗದ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು ಕಾನೂನಿನ ಕಾಲೇಜುಗಳು ಮತ್ತು ಐಟಿಐ ನಂತಹ ಪದವಿಗಳನ್ನು ಪಡೆಯಲು ಖಾಸಗಿ ಕಾಲೇಜಿಗೆ ಹೋಗಬೇಕಿದೆ. ಇದರಿಂದ ಬಡವರ ಮಕ್ಕಳಿಗೆ ವಿಪರೀತ ಶುಲ್ಕವನ್ನು ಕಟ್ಟಿ ವಿದ್ಯಾಭ್ಯಾಸ ಮಾಡಲು ಸಾಧ್ಯವಾಗುತ್ತಿಲ್ಲ. ಮಂಡ್ಯ ಜಿಲ್ಲೆಯಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಇನ್ನೂ ಹೆಚ್ಚಿನ ಮಹತ್ವವನ್ನು ನೀಡಬೇಕಿದೆ ಎಂದರು.
ರಾಜ್ಯಾದ್ಯಂತ ಕೇವಲ ಒಂದೇ ವಾರದಲ್ಲಿ ಸರಣಿ ಕೊಲೆಗಳು ನಡೆದು ಜನರಲ್ಲಿ ಆತಂಕ ಸೃಷ್ಟಿಸಿವೆ. ಮಂಗಳೂರಿನಲ್ಲಿ ಧರ್ಮದ ಹೆಸರಿನಲ್ಲಿ ನಡದೆ ಕೊಲೆಗಳು, ದಾವಣಗೆರೆಯಲ್ಲಿ ಮತ್ತು ಮೈಸೂರಿನಲ್ಲಿ ಗೂಂಡಾಗಿರಿಯ ಕಾರಣದಿಂದ ನಡೆದ ಕೊಲೆಗಳು, ಮಂಡ್ಯದ ಪಾಂಡವಪುರದಲ್ಲಿ ದ್ವೇಷದ ಕಾರಣಕ್ಕೆ ನಡೆದ ಕೊಲೆ ಇವೆಲ್ಲವೂ ಸರ್ಕಾರ ಮತ್ತು ಕಾನೂನು ವ್ಯವಸ್ಥೆಯ ವೈಪಲ್ಯವೇ ಸರಿ. ಈ ಕೃತ್ಯಗಳನ್ನು ಮಾಡಿದವರ ವಿರುದ್ಧ ಜಾಮೀನು ರಹಿತವಾದ ಕ್ರಮ ಕೈಗೊಂಡು ಶಿಕ್ಷೆ ವಿಧಿಸಬೇಕು. ಧರ್ಮದ ಹೆಸರಿನಲ್ಲಿ ಪ್ರಚೋದನೆ ಮಾಡಿ ಕೊಲೆ ಮತ್ತು ಗಲಭೆ ಸಂಭವಿಸಲು ಕಾರಣವಾಗುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು. ಗಾಂಜಾ, ಅಫೀಮು ಸೇರಿದಂತೆ ಮಾದಕ ವಸ್ತುಗಳ ಚಟದಿಂದಲೂ ಯುವಜನತೆ ದಿಕ್ಕು ತಪ್ಪಿ ಅಪರಾಧಗಳಾಗುತ್ತಿದ್ದು, ಇದಕ್ಕೆ ಕಡಿವಾಣ ಹಾಕಿ ಸೂಕ್ತ ಕ್ರಮ ಕೈಗೊಳ್ಳಬೇಕು. ಅಪರಾಧ ಕೃತ್ಯಗಳಲ್ಲಿ ನಿತಂತರವಾಗಿ ಭಾಗಿಯಾಗುವ ಗುಂಪನ್ನು ಎಲ್ಲ ಜಿಲ್ಲೆಗಳಲ್ಲಿಯೂ ಪಟ್ಟಿ ಮಾಡಿ ಅವರ ದಿನ ನಿತ್ಯದ ಚಟುವಟಿಕೆಗಳ ಮೇಲೆ ಕಣ್ಣಾವಲಿರಿಸುವಂತೆ ಪೊಲೀಸ್ ಇಲಾಖೆಗೆ ನಿರ್ದೇಶನ ಹೊರಡಿಸಬೇಕು ಎಂದು ಒತ್ತಾಯಿಸಿದರು.
ಅಖಿಲ ಭಾರತ ವಕೀಲರ ಸಂಘದ ಜಿಲ್ಲಾಧ್ಯಕ್ಷ ವಕೀಲ ಬಿ.ಟಿ.ವಿಶ್ವನಾಥ್, ಕರ್ನಾಟಕ ಜನಶಕ್ತಿಯ ರಾಜ್ಯ ಕಾರ್ಯದರ್ಶಿ ಪೂರ್ಣಿಮಾ, ಜಿಲ್ಲಾ ಕಾರ್ಯದರ್ಶಿ ಸಿದ್ದರಾಜು, ವಕೀಲರಾದ ಪಲ್ಲವಿ, ಕಿಶೋರ್, ಸಂತೋಷ್, ಚೇತನ್ ಇತರರಿದ್ದರು.