ವಸತಿ ನಿಲಯಗಳ ಸಮಸ್ಯೆ ಬಗೆಹರಿಸಲು ಒತ್ತಾಯ

raichur
raichur
Published on

 ರಾಯಚೂರು ಸಮಾಜ ಕಲ್ಯಾಣ ಇಲಾಖೆಗೆ ಒಳಪಡುವ ಎಲ್ಲಾ ವಸತಿ ನಿಲಯಗಳಲ್ಲಿನ ವಿದ್ಯಾರ್ಥಿಗಳ ವಿವಿಧ ಸಮಸ್ಯೆಗಳನ್ನು ಬಗೆಹರಿಸಲು ಒತ್ತಾಯಿಸಿ ದಲಿತ ವಿದ್ಯಾರ್ಥಿ ಪರಿಷತ್ ಜಿಲ್ಲಾ ಸಮಿತಿ ಪದಾಧಿಕಾರಿಗಳು ಬುಧವಾರ ಇಲಾಖೆಯ ಉಪ ನಿರ್ದೇಶಕ ಚಿದಾನಂದಪ್ಪ ಕುರಿ ಅವರಿಗೆ ಮನವಿ ಸಲ್ಲಿಸಿದರು.

ಮನವಿ ಸಲ್ಲಿಸಿದ ನಂತರ ಜಿಲ್ಲಾ ಸಂಚಾಲಕ ಮೌನೇಶ ಜಾಲವಾಡಗಿ ಮಾತನಾಡಿ, ಸರ್ಕಾರಗಳು ಶೈಕ್ಷಣಿಕ ಗುಣಮಟ್ಟವನ್ನು ಸುಧಾರಿಸಲು ಹಾಗೂ ವಿದ್ಯಾರ್ಥಿ ಯುವ ಜನರ ಬದುಕು ಕಟ್ಟಿ ಕೊಡಲು ಹಲವಾರು ಯೋಜನೆಗಳ ಮುಖಾಂತರ ಪ್ರಯತ್ನ ಪಡುತ್ತಿರುವ ಹಿನ್ನೆಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯಂತಹ ದೊಡ್ಡ ಇಲಾಖೆಯು ಅದರ ಅಧೀನದಲ್ಲಿ ಹಲವಾರು ಸಾಮಾಜಿಕ, ಶೈಕ್ಷಣಿಕ ಕಾರ್ಯಕ್ರಮಗಳನ್ನು ಕೂಡ ಕೊಡುತ್ತಿದ್ದು ಸದರಿ ಇಂತಹ ಯೋಜನೆಗಳು ಇಂದು ಸಮರ್ಪಕವಾಗಿ ವಿದ್ಯಾರ್ಥಿಯ ಜನರಿಗೆ ತಲುಪದೇ ಅಧಿಕಾರಿಗಳ ದಿವ್ಯ ನಿರ್ಲಕ್ಷದಿಂದ ಹಳ್ಳ ಹಿಡಿಯುವ ಪರಿಸ್ಥಿತಿಗೆ ತಲುಪಿದ್ದು ವಿಪರ್ಯಾಸವಾಗಿದೆ.


ಜಿಲ್ಲೆಗೆ ಒಳಪಡುವ ಎಲ್ಲಾ ತಾಲೂಕುಗಳ ವಸತಿ ನಿಲಯದಲ್ಲಿ ವಿದ್ಯಾರ್ಥಿಗಳು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿರುವ ಗಂಭೀರ ಆರೋಪಗಳು ಕೂಡ ಕೇಳಿಬರುತ್ತಿವೆ. ವಿದ್ಯಾರ್ಥಿಗಳಿಗೆ ಕುಡಿಯಲು ಶುಚಿಯಾದ ನೀರು ಸಿಗುತ್ತಿಲ್ಲ, ಪ್ರತಿ ತಿಂಗಳು ಪೇಪರ್ ಹಾಗೂ ಸ್ಪರ್ಧಾತ್ಮಕ ಮಾಸ ಪತ್ರಿಕೆಗಳು ಕೂಡ ಒದಗುತ್ತಿಲ್ಲ ಎಂದರು.
ಆದ್ದರಿಂದ ಜಿಲ್ಲೆಯ ಎಲ್ಲಾ ವಸತಿ ನಿಲಯದ ಬೇಟಿ ಅಥವಾ ವಿಚಾರಣೆ ಮಾಡಲು ತಮ್ಮ ಇಲಾಖೆಯಿಂದ ಒಂದು ಕಮಿಟಿಯನ್ನು ರಚನೆ ಮಾಡಿ,ವರದಿ ಮಾಡಿ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಸಮಿತಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಾಲರಾಜ್ ಕುರ್ಡಿ, ಜಿಲ್ಲಾ ಸಹ ಕಾರ್ಯದರ್ಶಿ ಕುಮಾರ ಬೈಲ್ ಮರ್ಚೆಡ್, ಅಶೋಕ್ ಜಾಲವಾಡಗಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net