ವಿದ್ಯುತ್ ಸಮಸ್ಯೆ ನೀಗಿಸಲು ಆಗ್ರಹ

ವಿದ್ಯುತ್ ಸಮಸ್ಯೆ ನಿವಾರಿಸಿ ರೈತರಿಗೆ ಬರ ಪರಿಹಾರವನ್ನು ಸಮರ್ಪಕವಾಗಿ ವಿತರಿಸಬೇಕು ಎಂದು ಆಗ್ರಹಿಸಿ ಶಾಸಕ ಎ. ಮಂಜು ನೇತೃತ್ವದಲ್ಲಿ ಮಂಗಳವಾರ ರೈತ ಸಂಘ ಮತ್ತು ಜೆಡಿಎಸ್ ಕಾರ್ಯಕರ್ತರು ಅರಕಲಗೂಡು ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ವಿದ್ಯುತ್ ಸಮಸ್ಯೆ ನಿವಾರಿಸಿ ರೈತರಿಗೆ ಬರ ಪರಿಹಾರವನ್ನು ಸಮರ್ಪಕವಾಗಿ ವಿತರಿಸಬೇಕು ಎಂದು ಆಗ್ರಹಿಸಿ ಶಾಸಕ ಎ. ಮಂಜು ನೇತೃತ್ವದಲ್ಲಿ ಮಂಗಳವಾರ ರೈತ ಸಂಘ ಮತ್ತು ಜೆಡಿಎಸ್ ಕಾರ್ಯಕರ್ತರು ಅರಕಲಗೂಡು ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
Published on

ಅರಕಲಗೂಡು: ಅಸಮರ್ಪಕ ವಿದ್ಯುತ್ ಸಮಸ್ಯೆ ನಿವಾರಿಸಿ ರೈತರಿಗೆ ಬರ ಪರಿಹಾರವನ್ನು ಸಮರ್ಪಕವಾಗಿ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ಶಾಸಕ ಎ.ಮಂಜು ನೇತೃತ್ವದಲ್ಲಿ ಮಂಗಳವಾರ ತಾಲೂಕು ಕಚೇರಿ ಎದುರು ರೈತ ಸಂಘ ಮತ್ತು ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಪ್ರತಿಭಟನಾಕಾರರು ಕಿಡಿಕಾರಿದರು. ಸಮಪರ್ಕಕವಾಗಿ ವಿದ್ಯುತ್ ಪೂರೈಕೆ ಮಾಡದೆ ಸರ್ಕಾರ ರೈತರ ಹಿತವನ್ನು ನಿರ್ಲಕ್ಷ್ಯಿಸುತ್ತಿದೆ. ಬರಗಾಲ ತಾಂಡವಾಡುತ್ತಿದ್ದು ರೈತರು ಒಣಗುತ್ತಿರುವ ಬೆಳೆಗಳಿಗೆ ನೀರು ಹಾಯಿಸಿಕೊಳ್ಳಲು ವಿದ್ಯುತ್ ಇಲ್ಲದೆ ಪರದಾಡುವಂತಾಗಿದೆ. ಬರಗಾಲದಿಂದಾಗಿ ಬೆಳೆ ಕಳೆದುಕೊಂಡಿರುವ ರೈತರಿಗೆ ವೈಜ್ಞಾನಿಕವಾಗಿ ಪರಿಹಾರ ನೀಡಿ ಅನ್ನದಾತರ ನೆರವಿಗೆ ಬರಬೇಕು ಎಂದು ಆಗ್ರಹಿಸಿದರು.

ತಾಲೂಕು ರೈತ ಸಂಘದ ಅಧ್ಯಕ್ಷ ಯೋಗಣ್ಣ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೇವಲ ಅಂಕಿ ಅಂಶಗಳ ಮೂಲಕ ಪರಿಹಾರ ಬಿಡುಗಡೆ ಮಾಡಿರುವುದಾಗಿ ಸುಳ್ಳು ಹೇಳುತ್ತಿವೆ ಹೊರತು ರೈತರ ಖಾತೆಗೆ ಹಣ ಮಾತ್ರ ಜಮೆ ಆಗಿಲ್ಲ. ವಿದ್ಯುತ್ ಪರಿವರ್ತಕ ನೀಡಲು ಹಣ ಸುಲಿಗೆ ಮಾಡಲಾಗುತ್ತಿದೆ. ಸರ್ಕಾರ ಬೋರ್‌ವೆಲ್ ಕೊರೆಯಿಸಲು ರೈತರಿಗೆ ನೀಡುತ್ತಿದ್ದ ಮೂಲ ಸೌಕರ್ಯಗಳಿಗೆ ಕತ್ತರಿ ಹಾಕಿ ಸೋಲಾರ ವ್ಯವಸ್ಥೆ ಜಾರಿಗೊಳಿಸಲು ಹೊರಟಿರುವುದು ಖಂಡನೀಯ ಎಂದು ಆರೋಪಿಸಿದರು.

ತಹಸೀಲ್ದಾರ್ ಬಸವರೆಡ್ಡಪ್ಪ ರೋಣದ ಅವರಿಗೆ ಮನವಿ ಸಲ್ಲಿಸಲಾಯಿತು. ಮುಖಂಡರಾದ ಕೆ. ಸತೀಶ್, ನರಸೇಗೌಡ, ಎಂ.ಎಸ್. ಯೋಗೇಶ್, ಸಂತೋಷ್‌ಗೌಡ, ಮುತ್ತಿಗೆ ರಮೇಶ್, ದಿವಾಕರ್, ಚೋಳೇನಹಳ್ಳಿ ದಿನೇಶ್, ನಂದಕುಮಾರ್, ಶಶಿಕುಮಾರ್, ಮುತಾಹಿರ್ ಪಾಷಾ, ಬಾಣದಹಳ್ಳಿ ಗಣೇಶ್, ರವಿಕುಮಾರ್, ಕಾಕೋಡನಹಳ್ಳಿ ಮಂಜು, ಚನ್ನಕೇಶವೇಗೌಡ, ಲೋಕನಾಥ್, ಸೋಮಶೇಖರ್, ರೈತ ಸಂಘದ ಶಶಿಕಲಾ, ಮುಗಳೂರು ಕೃಷ್ಣೇಗೌಡ, ಸೀಬಳ್ಳಿ ಲೋಕೇಶ್, ಶಿವಕುಮಾರ್, ವೇದಾನಂದ, ಲೋಕೇಶ್, ಕಿರಣ್ ಕುಮಾರ್, ಚಂದ್ರು, ಜಗದೀಶ್ ಇತರರು ಪಾಲ್ಗೊಂಡಿದ್ದರು.

ತಾಲೂಕು ಆಡಳಿತದಲ್ಲಿ ಸಾರ್ವಜನಿಕರ ಕೆಲಸ ಕಾರ್ಯಗಳು ಸುಗಮವಾಗಿ ಆಗುತ್ತಿಲ್ಲ. ಮಧ್ಯವರ್ತಿಗಳ ಹಾವಳಿ ಮಿತಿಮೀರಿದೆ. ಏಜೆಂಟ್‌ಗಳನ್ನು ಇಟ್ಟುಕೊಂಡು ದಂಧೆ ನಡೆಸಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ಶಾಸಕ ಎ.ಮಂಜು ಪ್ರತಿಭಟನೆ ವೇಳೆ ತಹಸೀಲ್ದಾರ್ ಬಸವರೆಡ್ಡಪ್ಪ ರೋಣದ ಅವರನ್ನು ಆಗ್ರಹಿಸಿದರು. ಸಾರ್ವಜನಿಕರಿಗೆ ರಕ್ಷಣೆ ಕೊಡಬೇಕಾದ ಪೊಲೀಸರು ಜನಸಾಮಾನ್ಯರ ಮೇಲೆ ರಾಕ್ಷಸರಂತೆ ವರ್ತಿಸುತ್ತಿರುವ ಕುರಿತು ಸಾರ್ವಜನಿಕ ವಲಯದಲ್ಲಿ ದೂರುಗಳು ವ್ಯಾಪಕವಾಗಿವೆ. ಕಾನೂನಿಗೆ ವಿರುದ್ಧವಾಗಿ ವರ್ತಿಸುತ್ತಾ ಪೊಲೀಸರು ಜನರಿಗೆ ಕೇಸು ಹಾಕುವುದಾಗಿ ಬೆದರಿಸುವುದನ್ನು ನಿಲ್ಲಿಸದಿದ್ದರೆ ಸಾರ್ವಜನಿಕರು ಪೊಲೀಸ್ ಇಲಾಖೆ ವಿರುದ್ಧ ಬೀದಿಗಿಳಿದು ಹೋರಾಟ ನಡೆಸಲಿದ್ದಾರೆ. ಸರ್ಕಲ್ ಇನ್ಸ್‌ಪೆಕ್ಟರ್ ಕರೆಸಿ ಖಡಕ್ಕಾಗಿ ಎಚ್ಚರಿಕೆ ನೀಡುವಂತೆ ಶಾಸಕ ಎ. ಮಂಜು ಅವರು ತಹಸೀಲ್ದಾರ್ ಬಸವರೆಡ್ಡಪ್ಪ ರೋಣದ ಅವರಿಗೆ ತಾಕೀತು ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net