ವಿದ್ಯುತ್ ಸಮಸ್ಯೆ ಪರಿಹರಿಸಲು ಆಗ್ರಹ

STRIKE
Published on

ಶಿರಸಿ: ಸಮರ್ಪಕ ವಿದ್ಯುತ್ ಪೂರೈಕೆ ಹಾಗೂ ವಿದ್ಯುತ್ ಸರಬರಾಜು ಕೇಂದ್ರದ ಸಮಸ್ಯೆಯನ್ನು ಶೀಘ್ರವೇ ಪರಿಹರಿಸಬೇಕು ಎಂದು ಆಗ್ರಹಿಸಿ ತಾಲೂಕಿನ ಬನವಾಸಿಯಲ್ಲಿ ಬೆಳಗ್ಗೆಯಿಂದ ಮಧ್ಯಾಹ್ನವರೆಗೆ ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಿ ಸಾರ್ವಜನಿಕರು ಹಾಗೂ ರೈತರು ಬುಧವಾರ ಪಂಪ ವೃತ್ತದ ಬಳಿ ಪ್ರತಿಭಟನೆ ನಡೆಸಿದರು.

ನೀರಿನ ಸಮಸ್ಯೆಯಿಂದ ಜಮೀನುಗಳಲ್ಲಿ ಬೆಳೆಗಳು ಒಣಗುತ್ತಿವೆ. ವೋಲ್ಟೇಜ್ ಸಮಸ್ಯೆಯಿಂದ ಬೋರ್‌ವೆಲ್‌ಗಳು ಕಾರ್ಯನಿರ್ವಹಿಸುತ್ತಿಲ್ಲ. ಕೆಲ ಪಂಪ್‌ಸೆಟ್‌ಗಳು ಸುಟ್ಟು ಹೋಗಿವೆ. ಕೂಡಲೇ ವಿದ್ಯುತ್ ಸಮಸ್ಯೆ ಪರಿಹರಿಸದಿದ್ದರೆ ಕದಂಬೋತ್ಸವ ಬಹಿಷ್ಕರಿಸುವುದರ ಜತೆಗೆ ಕರಾಳ ಉತ್ಸವವನ್ನಾಗಿ ಆಚರಿಸುತ್ತೇವೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು. ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಆಗಮಿಸಬೇಕು ಎಂದು ಪಟ್ಟು ಹಿಡಿದರು.

ತಹಸೀಲ್ದಾರ್ ಶೈಲೇಶ ಪರಮಾನಂದ ಸ್ಥಳಕ್ಕಾಗಮಿಸಿ ಪ್ರತಿಭಟನಾಕಾರರ ಮನವೊಲಿಸಿದರು.

ಜಯಶೀಲ ಗೌಡ ಮಾತನಾಡಿ, ಬನವಾಸಿಯಲ್ಲಿ ವಿದ್ಯುತ್ ಸರಬರಾಜು ಕೇಂದ್ರ ಇಲ್ಲದಿರುವುದು ಹಾಗೂ ವಿದ್ಯುತ್ ಸರಬರಾಜು ಕೇಂದ್ರ ಉದ್ಘಾಟನೆಗೆ ಸಾಕಷ್ಟು ಅಡೆ-ತಡೆಗಳು ಉಂಟಾಗಿರುವುದರಿಂದ ಸಮಸ್ಯೆಗೆ ಕಾರಣವಾಗಿದೆ. ಇದಕ್ಕೆ ಶೀಘ್ರವೇ ಪರಿಹಾರ ಕಂಡುಕೊಳ್ಳದಿದ್ದರೆ ಏ. 12 ಮತ್ತು 13ರಂದು ಕರಾಳ ಉತ್ಸವ ಆಚರಿಸಲು ಮುಂದಾಗುತ್ತೇವೆ ಎಂದು ಹೇಳಿದರು.

ಮನವಿ ಸ್ವೀಕರಿಸಿ ಮಾತನಾಡಿದ ತಹಸೀಲ್ದಾರರು, ಜಡೆ ಭಾಗದ 28ರಲ್ಲಿ 18 ಬಾಕಿ ಇದೆ. ಬನವಾಸಿ ಭಾಗದಲ್ಲಿ 10 ಟವರ್ ಸಂಪೂರ್ಣಗೊಂಡಿದ್ದು, 3 ಬಾಕಿ ಇದೆ. ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿ ವಿಚಾರಣೆ ಬಾಕಿ ಇರುವುದಿಂದ 3 ವಿದ್ಯುತ್ ಕಂಬ ಅಳವಡಿಸಲು ಸಾಧ್ಯವಾಗಿಲ್ಲ. ಆದ್ದರಿಂದ ಬನವಾಸಿ ಗ್ರಿಡ್ ಆರಂಭಕ್ಕೆ ತೊಂದರೆಯಾಗಿದೆ. ಮುಂದಿನ ವಾರ ವಿಚಾರ ನಡೆಯುತ್ತದೆ ಎಂಬ ಮಾಹಿತಿ ಲಭ್ಯವಾಗಿದ್ದು, ನ್ಯಾಯಾಲಯದಲ್ಲಿ ಪ್ರಕರಣ ಇತ್ಯರ್ಥವಾದರೆ ಒಂದು ವಾರದಲ್ಲಿ ಕಾಮಗಾರಿ ಆರಂಭಿಸಲಾಗುತ್ತದೆ. ಹೆಚ್ಚುವರಿ ಫೀಡರ್ ಅಳವಡಿಸಿ ತಾತ್ಕಾಲಿಕವಾಗಿ ಸಮಸ್ಯೆಗೆ ಪರಿಹಾರ ದೊರಕಿಸುತ್ತೇವೆ ಎಂದು ಹೆಸ್ಕಾಂನವರು ಭರವಸೆ ನೀಡಿದ್ದಾರೆ. ಅಲ್ಲಿಯವರೆಗೆ ರೈತರು ಹಾಗೂ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ವಿನಂತಿಸಿದರು.

ಪ್ರತಿಭಟನೆಯಲ್ಲಿ ವಿನಯ ಗೌಡ, ಶಿವಕುಮಾರ ದೇಸಾಯಿಗೌಡ, ಶಿವಾಜಿ ಕಾಳೇರಮನೆ, ಶಾಂತಲಾ ಕಾನಳ್ಳಿ, ವಿ.ಜಿ. ನಾಯಕ, ವೀರಭದ್ರ ಗೌಡ ತಿಗಣಿ, ವೀರೇಂದ್ರ ಗೌಡ ಬಾಶಿ, ಗಜಾನನ ಗೌಡ, ವಿಶ್ವನಾಥ ಹಾದಿಮನಿ, ರೈತರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net