ಬಳ್ಳಾರಿ ; ಮೆಗಾ ಡೈರಿ ಸ್ಥಾಪನೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಇಲ್ಲಿನ ಡಿಸಿ ಕಚೇರಿ ಆವರಣದಲ್ಲಿ ಜಿಲ್ಲಾ ಹಾಲು ಉತ್ಪಾದಕ ರೈತರ ಹೋರಾಟ ಸಮಿತಿಯ ಮಖಂಡರು ಸೋಮವಾರ ಪ್ರತಿಭಟನೆ ನಡೆಸಿದರು.
ನಗರದ ಗಾಂಧಿಭವನದಿಂದ ಪ್ರತಿಭಟನಾ ಮೆರವಣಿಗೆ ಆರಂಭವಾಗಿ ರಾಯಲ್ ವೃತ್ತ ಮಾರ್ಗವಾಗಿ ಡಿಸಿ ಕಚೇರಿಯವರೆಗೆ ನಡೆಯಿತು. ಮೆರವಣಿಗೆಯಲ್ಲಿ ತೊಲಗಲಿ ತೊಲಗಲಿ ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ತೊಲಗಲಿ, ಸ್ಥಾಪಿಸಿ ಸ್ಥಾಪಿಸಿ ಮೆಗಾ ಡೈರಿ ಬಳ್ಳಾರಿಯಲ್ಲಿ ಸ್ಥಾಪಿಸಿ ಸೇರಿದಂತೆ ವಿವಿಧ ಘೋಷಣೆಗಳನ್ನು ಕೂಗಿದರು. ಬಳಿಕ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಸಾಮಾಜಿಕ ಹೋರಾಟಗಾರ ಸಿರಿಗೇರಿ ಪನ್ನರಾಜ್ ಮಾತನಾಡಿ, ರೈತರಿಗೆ ಸಂದಾಯ ಮಾಡಬೇಕಾದ ಹಾಲು ಖರೀದಿ ಮೊತ್ತದಲ್ಲಿ ಪ್ರತಿ ಲೀಟರ್ ಹಾಲಿಗೆ 1.50 ರೂ ಕಡಿತ ಮಾಡುತ್ತಿದೆ. ಈಗಾಗಲೇ ಸಂಕಷ್ಟದಲ್ಲಿ ಬದುಕುತ್ತಿರುವ ರೈತರ ನಿರಂತರ ಹೋರಾಟ ಬೇಡಿಕೆ ನಂತರವೂ ಕೇವಲ ಮೌಖಿಕ ಭರವಸೆ ನೀಡುತ್ತಿದೆ. ಪ್ರತಿ ಲೀಟರ್‌ಗೆ 1.50ರೂ ಕಡಿತವನ್ನು ಮುಂದುವರೆಸುತ್ತಾರೆ. ಬಾಕಿ ಸಹ ಸಂದಾಯ ಮಾಡದೇ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿದರು.
ಬಳ್ಳಾರಿಯ ಹೊರವಲಯದ ಕೊಳಗಲ್ ಗ್ರಾಮದಲ್ಲಿ 15 ಎಕರೆ ಸರಕಾರಿ ಜಮೀನನ್ನು ಬಳ್ಳಾರಿ ಮೆಗಾಡೈರಿ ನಿರ್ಮಾಣಕ್ಕಾಗಿ ಜಿಲ್ಲಾಕಾರಿ 2.69 ಕೋಟಿ ರೂ. ಪಾವತಿಸಲು ಒಕ್ಕೂಟದ ಆಡಳಿತ ಮಂಡಳಿಗೆ ಲಿಖಿತವಾಗಿ ಸೂಚಿಸಿದ್ದಾರೆ. ಒಕ್ಕೂಟದ ಆಡಳಿತ ಮಂಡಳಿಯು ಹಣ ಪಾವತಿಸದೇ ನಿರ್ಲಕ್ಷ ತೋರುತ್ತಾ ಬಂದಿದೆ. ಪ್ರಸ್ತುತ ಒಕ್ಕೂಟದ ಕಟ್ಟಡವು ಶಿಥಿಲಾವಸ್ಥೆಯಲ್ಲಿದೆ. ಮೆಗಾ ಡೈರಿ ನಿರ್ಮಾಣ ಅನಿವಾರ್ಯತೆಯಿದೆ ಎಂದು ಒತ್ತಾಯಿಸಿದರು.