ತಿಮ್ಮಾಪುರ ಗ್ರಾಮಕ್ಕೆ ಬಸ್ ಓಡಿಸುವಂತೆ ಆಗ್ರಹ

Demand to run a bus to Thimmapura village
Published on

ಬ್ಯಾಡಗಿ: ತಾಲೂಕಿನ ತಿಮ್ಮಾಪುರ ಗ್ರಾಮಕ್ಕೆ ಬಸ್ ಓಡಿಸುವಂತೆ ಆಗ್ರಹಿಸಿ ಕರವೇ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಸಾರಿಗೆ ವ್ಯವಸ್ಥಾಪಕರಿಗೆ ಮಂಗಳವಾರ ಮನವಿ ಸಲ್ಲಿಸಿದರು.

ಕರವೇ ಸ್ವಾಭಿಮಾನಿ ಸೇನೆ ತಾಲೂಕು ಘಟಕದ ಅಧ್ಯಕ್ಷ ಮಂಜುನಾಥ ದಾನಪ್ಪನವರ ಮಾತನಾಡಿ, ತಾಲೂಕು ಕೇಂದ್ರದಿಂದ 30 ಕಿಮೀ ದೂರದ ತಿಮ್ಮಾಪುರ ಗ್ರಾಮ ಹರಿಹರ-ಸಮ್ಮಸಗಿ ರಸ್ತೆಯಿಂದ 2 ಕಿಮೀ, ಹಾವೇರಿ-ಚಿಕ್ಕಬಾಸೂರು-ಚಿಕ್ಕೇರೂರು ಮಾರ್ಗದ ರಸ್ತೆಯಿಂದ 3 ಕಿಮೀ ಅಂತರದಲ್ಲಿದೆ. 2 ಸಾವಿರ ಜನಸಂಖ್ಯೆಯ ಗ್ರಾಮಕ್ಕೆ ಬಂದು-ಹೋಗಲು ಒಂದು ಸಾರಿಗೆ ಬಸ್​ಗಳಿಲ್ಲ. ಪಕ್ಕದ ಸೂಡಂಬಿ, ಗುಡ್ಡದಮಲ್ಲಾಪುರ, ಹಂಸಭಾವಿ ಕಡೆಗೆ ಶಾಲಾ ಕಾಲೇಜ್​ಗೆ ತೆರಳುವ ವಿದ್ಯಾರ್ಥಿಗಳು ಪ್ರತಿನಿತ್ಯ ಗೋಳಾಡುವಂತಾಗಿದೆ. ಮಹಿಳೆಯರು, ಅಂಗವಿಕಲರು, ವೃದ್ಧರು, ಆಸ್ಪತ್ರೆಗೆ ತೆರಳುವರು ಬಸ್​ಗಳಿಲ್ಲದೆ ಪರಡಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕರವೇ ಗ್ರಾಮ ಘಟಕದ ಅಧ್ಯಕ್ಷ ಹೂವನಗೌಡ ಭರಮಗೌಡ್ರ ಮಾತನಾಡಿ, 10 ವರ್ಷದ ಹಿಂದೆ ತಹಸೀಲ್ದಾರರು ಗ್ರಾಮ ವಾಸ್ತವ್ಯ ಮಾಡಿ ಗ್ರಾಮಕ್ಕೆ ಸಾರಿಗೆ ಓಡಿಸಲು ಸೂಚಿಸಿ ಮರುದಿನ ಬಂದು ಹೋದ ಬಸ್ ಇಂದಿಗೂ ಮರಳಿ ಬಂದಿಲ್ಲ ಎಂದರು.

ಪ್ರತಿದಿನ ರಾತ್ರಿ 8 ಗಂಟೆಗೆ ತಾಲೂಕು ಕೇಂದ್ರದಿಂದ ಮೊದಲಿನಂತೆ ಬ್ಯಾಡಗಿ-ಗುಡ್ಡದಮಲ್ಲಾಪುರ ವಾಸ್ತವ್ಯ ಬಸ್ ಓಡಿಸಬೇಕು. ಹಂಸಭಾವಿ-ತಿಳವಳ್ಳಿ ಮಾರ್ಗದ ಎಲ್ಲ ಬಸ್​ಗಳು ಗ್ರಾಮಕ್ಕೆ ಬಂದು ಹೋಗಬೇಕು. ಬ್ಯಾಡಗಿ-ಚಿಕ್ಕಳ್ಳಿ ಮಾರ್ಗದ ಬಸ್ ಅನ್ನು ಸೂಡಂಬಿ ಮೂಲಕ ತಿಮ್ಮಾಪುರಕ್ಕೆ ಕಳುಹಿಸಬೇಕು. ತಿಮ್ಮಾಪುರ ಕ್ರಾಸ್ ಬಳಿ ಬ್ಯಾಡಗಿ, ಹಿರೇಕೆರೂರು, ಹಾನಗಲ್ಲ ಘಟಕದ ಎಲ್ಲ ಬಸ್​ಗಳಿಗೆ ಕೋರಿಕೆ ಮೇರೆಗೆ ನಿಲುಗಡೆಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.

ವನಜಾಕ್ಷಿ ಭರಮಗೌಡ್ರ, ಲಲಿತಾ ಸಾತೇನಹಳ್ಳಿ, ಶಂಕ್ರವ್ವ ಲಕ್ಕೊಳ್ಳಿ, ಶಿವನಂದವ್ವ ಮೂಡಿ, ಕರಬಸಪ್ಪ ಕೊಪ್ಪದ, ಸರಸ್ವತಿ ಕೊಪ್ಪದ, ಮಂಜು ಮೂಡೇರ, ಶಾಂತಪ್ಪ ಕೂರ್ಗೆರ, ಸುರೇಶ ದುಮ್ಮಿಹಾಳ, ಪ್ರಕಾಶ ಸಾತೇನಹಳ್ಳಿ ಇತರರಿದ್ದರು.

ಶಕ್ತಿ ಯೋಜನೆ ಮೂಲಕ ಮಹಿಳೆಯರು ಸರ್ಕಾರಿ ಬಸ್​ಗಳಲ್ಲಿ ಉಚಿತವಾಗಿ ಓಡಾಡಲು ಅನುಕೂಲ ಮಾಡಿದೆ. ಆದರೆ, ಗ್ರಾಮಕ್ಕೆ ಬಸ್​ಗಳೇ ಬರುತ್ತಿಲ್ಲ. ಮಹಿಳೆಯರು, ಶಾಲಾ-ಕಾಲೇಜು ಬಾಲಕಿಯರು ಶಕ್ತಿ ಯೋಜನೆಯಿಂದ ವಂಚಿತರಾಗಿದ್ದಾರೆ. ತಾಲೂಕು ಕೇಂದ್ರಕ್ಕೆ ಬಂದು-ಹೋಗಲು ಸಾರಿಗೆ ವ್ಯವಸ್ಥೆಯಿಲ್ಲವಾದ ಮೇಲೆ ಜನರ ಗೋಳು ಕೇಳೋರ್ಯಾರು. ಕೂಡಲೇ ಜಿಲ್ಲಾ ಹಾಗೂ ತಾಲೂಕು ಸಾರಿಗೆ ವ್ಯವಸ್ಥಾಪಕರು ಗಮನಹರಿಸಿ ನ್ಯಾಯ ಕೊಡಬೇಕು. ನಿರ್ಲಕ್ಷ್ಯ ತೋರಿದಲ್ಲಿ ಮಹಿಳಾ ಘಟಕದ ವತಿಯಿಂದ ರಸ್ತೆ ತಡೆ ಹಮ್ಮಿಕೊಳ್ಳಲಾಗುವುದು. | ಸುಮಾ ಪುರದ, ಕರವೇ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net