

ಸವಣೂರ: ಬೆಂಗಳೂರಿನಲ್ಲಿ ಆರ್ಸಿಬಿ ತಂಡದ ವಿಜಯೋತ್ಸವ ವೇಳೆ ಕಾಲ್ತುಳಿತದಲ್ಲಿ 11 ಜನ ಅಮಾಯಕರ ಸಾವಿಗೆ ಕಾರಣವಾದ ಸರ್ಕಾರ ಕ್ರಮ ಹಾಗೂ 5 ಜನ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿರುವುದನ್ನು ಖಂಡಿಸಿ ಪಟ್ಟಣದಲ್ಲಿ ಬಿಜೆಪಿ ಮಂಡಲದ ವತಿಯಿಂದ ಸೋಮವಾರ ಪ್ರತಿಭಟನೆ ಕೈಗೊಂಡು ಗ್ರೇಡ್-2 ತಹಸೀಲ್ದಾರ್ ಗಣೇಶ ಸವಣೂರ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಹಾಗೂ ವಿಧಾನಸೌದ ಮುಂಭಾಗದ ಎರಡು ಸ್ಥಳಗಳಲ್ಲಿ ಪೂರ್ವ ಸಿದ್ಧತೆ ಇಲ್ಲದೆ ರಾಜ್ಯ ಸರ್ಕಾರ ಸನ್ಮಾನ ಕಾರ್ಯಕ್ರಮ ಆಯೋಜನೆ ಮಾಡಿತ್ತು. ಅಭಿಮಾನಿಗಳು ಎರಡು ಸ್ಥಳಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸೇರಿದ್ದರು. ಆದರೆ, ವಿಧಾನಸೌಧ ಮುಂಭಾಗದಲ್ಲಿ ಮಾತ್ರ ಪೊಲೀಸ್ ಭದ್ರತೆ ಒದಗಿಸಿ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬಳಿ ಸೂಕ್ತ ಭದ್ರತೆ ಮಾಡಿರಲಿಲ್ಲ. ಸರ್ಕಾರದ ವೈಫಲ್ಯದಿಂದಾಗಿ ಚಿನ್ನಸ್ವಾಮಿ ಕ್ರೀಡಾಂಗಣದ ಮುಂಭಾಗದಲ್ಲಿ ನೂಕುನುಗ್ಗಲಿನಿಂದ ಕಾಲ್ತುಳಿತ ಉಂಟಾಗಿ 11 ಜನ ಅಮಾಯಕರು ಸಾವನ್ನಪ್ಪಿ, ನೂರಾರು ಜನ ಗಾಯಗೊಂಡಿದ್ದಾರೆ. ಸರ್ಕಾರದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ವಿಜಯೋತ್ಸವ ಮಗ್ನರಾಗಿ ಲೋಪವೆಸಗಿದೆ ಎಂದು ದೂರಿದರು.
ಸರ್ಕಾರ ತನ್ನ ತಪ್ಪು ಮುಚ್ಚಿಕೊಳ್ಳಲು 5 ಜನ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿರುವುದು ಖಂಡನೀಯ. ಕೂಡಲೇ ಅಮಾನತು ಹಿಂಪಡೆಯಬೇಕು. ಘಟನೆಯ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ ಹಾಗೂ ಗೃಹ ಸಚಿವ ಜಿ. ಪರಮೇಶ್ವರ ಕೂಡಲೇ ರಾಜೀನಾಮೆ ನೀಡಬೇಕು. ಇಲ್ಲದೆ ಹೋದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಅನಿವಾರ್ಯವಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.
ಬಿಜೆಪಿ ಮಂಡಲ ಅಧ್ಯಕ್ಷ ಶಿವಪುತ್ರಪ್ಪ ಕಲಕೋಟಿ, ಪದಾಧಿಕಾರಿಗಳಾದ ಗಂಗಾಧರ ಬಾಣದ, ಎಂ.ಕೆ. ಬಿಜ್ಜೂರ, ಡಿ.ಎಸ್. ಮಾಳಗಿ, ಬಸನಗೌಡ ಕೊಪ್ಪದ, ಚನ್ನಬಸಯ್ಯ ಪ್ರಭಯ್ಯನವರಮಠ, ಮಲ್ಲಾರಪ್ಪ ತಳ್ಳಿಹಳ್ಳಿ, ಗಾಳೆಪ್ಪ ದೊಡ್ಡಪೂಜಾರ, ನಿಂಗಪ್ಪ ಬಂಕಾಪೂರ, ಅಶೋಕ ಯಲಿಗಾರ, ಸೋಮನಗೌಡ ಪಾಟೀಲ, ಸೋಮನಗೌಡ ಲಕ್ಕನಗೌಡ್ರ, ಮಹೇಶ ಮಲಕಣ್ಣವರ, ನಂದೀಶ ಗೊಡ್ಡೆಮ್ಮಿ, ಶಂಕರ ಹೊಸಮನಿ, ಸಂಗನಗೌಡ ಹೊಂಬರಡಿ, ಶಿವನಗೌಡ ಬಿಸನಳ್ಳಿ, ಜಗದೀಶ ಸೊಪ್ಪಿನ, ಬಿ.ಎಸ್. ಪಾಟೀಲ, ಮಹೇಂದ್ರ ಬಡಿಗೇರ, ಬಂಗಾರಿಗೌಡ ಚನ್ನವೀರಗೌಡ್ರ, ಈರಣ್ಣ ಜಲ್ಲಾಪೂರ, ಹನುಮಂತಪ್ಪ ದೊಡ್ಡಮನಿ, ರಮೇಶ ಶಿಗ್ಗಾವಿ, ಉಡಚಪ್ಪ ಬಡಲಿಂಗಪ್ಪನವರ, ಸಂತೋಷ ಅಯ್ಯನಗೌಡ್ರ, ಬಿಜೆಪಿ ಕಾರ್ಯಕರ್ತರು ಹಾಗೂ ಇತರರು ಇದ್ದರು.