

ಬೇಲೂರು: ಪಟ್ಟಣದ ನೆಹರುನಗರದಲ್ಲಿರುವ ಗಣಪತಿ ಪ್ರತಿಷ್ಠಾಪನಾ ಜಾಗವನ್ನು ಪುರಸಭೆಯಿಂದ ಭೂಗಳ್ಳರಿಗೆ ಅಕ್ರಮ ಖಾತೆ ಮಾಡಿದ್ದು, ಅದನ್ನು ಗಣಪತಿ ಪ್ರತಿಷ್ಠಾಪನಾ ಸಮಿತಿಗೆ ವಾಪಸ್ ಖಾತೆ ಮಾಡಬೇಕು. ಇಲ್ಲದಿದ್ದಲ್ಲಿ ಪುರಸಭೆ ಎದುರು ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಶ್ರೀವಿದ್ಯಾ ಗಣಪತಿ ಸೇವಾ ಸಮಿತಿ ಟ್ರಸ್ಟ್ ಅಧ್ಯಕ್ಷ ಕೆ.ಜಿ.ಕುಮಾರಸ್ವಾಮಿ ಎಚ್ಚರಿಸಿದರು.
40 ವರ್ಷಗಳಿಂದ ನೆಹರುನಗರದಲ್ಲಿ ಗಣಪತಿ ಪ್ರತಿಷ್ಠಾಪನೆ ಮಾಡಿಕೊಂಡು ಬರುತ್ತಿದ್ದೆವು. 20 ವರ್ಷಗಳ ಹಿಂದೆ ಕೂಡ್ಲುರು ನಾಲೆ ಬಳಿ ಇರುವ 1400 ಅಡಿ ಸರ್ಕಾರಿ ಜಾಗದಲ್ಲಿ ಗಣಪತಿ ಕೂರಿಸಲು ಪ್ರಾರಂಭಿಸಿದೆವು. ಆದರೆ ಇದರ ಪಕ್ಕದಲ್ಲೆ ಕೆಲ ವರ್ಷಗಳ ಹಿಂದೆ ಮಲ್ಲಿಕಾರ್ಜುನ ಗ್ರೂಪ್ ಮಾಲೀಕರು ಪೆಟ್ರೋಲ್ ಬಂಕ್ ತೆರೆದರು. ಅಲ್ಲಿಂದ ಗಣಪತಿ ಜಾಗದ ಬಗ್ಗೆ ಸಮಸ್ಯೆ ಪ್ರಾರಂಭವಾಯಿತು. ಕಳೆದ ವರ್ಷದ ಜನವರಿಯಲ್ಲಿ ಕೆಲವರು ಅಳತೆಗೆ ಬಂದಿದ್ದರು. ಅವರನ್ನು ತಡೆದು ಕೇಳಿದಾಗ ಇದು ಮಲ್ಲಿಕಾರ್ಜುನ ಗ್ರೂಪಿಗೆ ಸೇರಿದ್ದು ಎಂದರು. ಆಗ ನಾವೆಲ್ಲ ಪುರಸಭೆಗೆ ಹೋಗಿ ಮಾಹಿತಿ ಪಡೆದಾಗ ಖಾತೆ ಆಗಿರುವುದು ಕಂಡುಬಂತು ಎಂದು ಸುದ್ದಿಗೋಷ್ಠಿಯಲ್ಲಿ ಗುರುವಾರ ತಿಳಿಸಿದರು.
ಈ ವಿಚಾರವಾಗಿ ಪ್ರತಿಭಟನೆ ಮಾಡಿ ಪುರಸಭೆಗೆ ಮುತ್ತಿಗೆ ಹಾಕಿದಾಗ ಅಧ್ಯಕ್ಷರು ಸರ್ವೇ ಮಾಡಿಸಿ ಗಣಪತಿ ದೇಗುಲಕ್ಕೆ ಸೇರಿದ ಜಾಗವನ್ನು ಉಳಿಸಲು ಖಾತೆ ರದ್ದು ಮಾಡುತ್ತೇವೆ ಎಂಬ ಭರವಸೆ ಕೊಟ್ಟಿದ್ದರು. ಅಲ್ಲದೆ ಕಳೆದ ವಾರ ಜಿಲ್ಲಾಧಿಕಾರಿಗಳು ಬೇಲೂರಿಗೆ ಬಂದಾಗ ಮನವಿ ಸಲ್ಲಿಸಿದ ವೇಳೆ ದಾಖಲೆ ಪರಿಶೀಲಿಸಿ ಕ್ರಮ ಕೈಗೊಳ್ಳಲು ತಹಸೀಲ್ದಾರ್‌ಗೆ ಸೂಚಿಸಿದರು. ಆದರೆ ತಹಸೀಲ್ದಾರ್ ನಡೆ ಮೇಲೆಯೇ ನಮಗೆ ಅನುಮಾನ ಮೂಡುತ್ತಿದೆ. ಅವರು ಯಾರದೋ ಒತ್ತಡಕ್ಕೆ ಮಣಿದಿದ್ದಾರೆ ಎನಿಸುತ್ತಿದೆ. ಪುರಸಭೆ ಮುಖ್ಯಧಿಕಾರಿ ಆ ಜಾಗವನ್ನು ಅಕ್ರಮ ಖಾತೆ ಮಾಡಿ ಭೂಗಳ್ಳರಿಗೆ ಸಹಕಾರ ನೀಡಿದ್ದಾರೆ. ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಮತ್ತು ಗಣಪತಿ ಪ್ರತಿಷ್ಠಾನದ ಜಾಗವು ಉಳಿಯುವ ತನಕ ಹೋರಾಡಲು ಸಿದ್ಧತೆ ನಡೆಸಿದ್ದೇವೆ ಎಂದು ಮಾಹಿತಿ ನೀಡಿದರು.
ಶ್ರೀ ವಿದ್ಯಾ ಗಣಪತಿ ಸೇವಾ ಸಮಿತಿ ಟ್ರಸ್ಟ್ ಉಪಾಧ್ಯಕ್ಷ ಸುಂದರರಾಜ್, ಪ್ರಧಾನ ಕಾರ್ಯದರ್ಶಿ, ಬಿ.ಆರ್.ಭರತ್, ಸಲಹಾ ಸಮಿತಿ ಸದಸ್ಯರಾದ ಬಿ.ಆರ್.ಅಶೋಕ್, ಬಿ.ಆರ್.ಕುಮಾರ್ ಇದ್ದರು.