

ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸರಗೂರು ಗ್ರಾಮದ ಬಳಿ ಸ್ಥಗಿತಗೊಂಡಿರುವ ಏತ ನೀರಾವರಿ ಯೋಜನೆಯನ್ನು ಮರು ಆರಂಭಿಸುವಂತೆ ತಾಲೂಕು ರೈತ ಸಂಘದ ಪದಾಧಿಕಾರಿಗಳು ಶನಿವಾರ ಶಾಸಕ ಎಂ.ಆರ್.ಮಂಜುನಾಥ್ ಅವರಿಗೆ ಮನವಿ ಸಲ್ಲಿಸಿದರು.
ಹನೂರಿನ ಕೃಷಿ ಉತ್ಪನ್ನ ಮಾರುಕಟ್ಟೆ ಕಚೇರಿಯಲ್ಲಿ ಶಾಸಕರನ್ನು ಭೇಟಿಯಾದ ವೇಳೆ ಸಂಘದ ತಾಲೂಕು ಅಧ್ಯಕ್ಷ ಅಮ್ಜಾದ್‌ಖಾನ್ ಮಾತನಾಡಿ, ಸರಗೂರು ಭಾಗದಲ್ಲಿ ನೂರಾರು ರೈತರು ಕೃಷಿ ಮಾಡುತ್ತಿದ್ದು, ಇವರಿಗೆ ಅನುಕೂಲ ಕಲ್ಪಿಸುವ ಸಲುವಾಗಿ ಸರ್ಕಾರ 1983ರಲ್ಲಿ ಏತ ನೀರಾವರಿ ಯೋಜನೆಯನ್ನು ರೂಪಿಸಿತ್ತು. ಆದರೆ ಕೆಲ ವರ್ಷಗಳ ಬಳಿಕ ಈ ಯೋಜನೆ ಸ್ಥಗಿತಗೊಂಡಿದೆ. ಇದರಿಂದ ರೈತರು ತೊಂದರೆ ಅನುಭವಿಸುತ್ತಿದ್ದಾರೆ. ಆದ್ದರಿಂದ ಈ ಬಗ್ಗೆ ವಿಶೇಷ ಕಾಳಜಿ ವಹಿಸಿ ಏತ ನೀರಾವರಿ ಯೋಜನೆಯನ್ನು ಮರು ಆರಂಭಿಸುವುದರ ಮೂಲಕ ರೈತರಿಗೆ ಅನುಕೂಲ ಕಲ್ಪಿಸುವಂತೆ ಮನವಿ ಮಾಡಿದರು. ಇದಕ್ಕೆ ಶಾಸಕರು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮವಹಿಸುವುದಾಗಿ ಭರವಸೆ ನೀಡಿದರು.
ರಸ್ತೆ ನಿರ್ಮಿಸಿ ಕೊಡುವ ಭರವಸೆ:
ಪಟ್ಟಣದ ಆರ್.ಎಸ್.ದೊಡ್ಡಿ ಬಳಿಯಿರುವ ರೈತ ಸಂಪರ್ಕ ಕೇಂದ್ರಕ್ಕೆ ಮಲೆಮಹದೇಶ್ವರ ಬೆಟ್ಟದ ಮುಖ್ಯ ರಸ್ತೆಯಿಂದ ಸಂಪರ್ಕ ಕಲ್ಪಿಸಲಾಗಿದೆ. ಆದರೆ ಈ ರಸ್ತೆಯು ಮಣ್ಣಿನಿಂದ ಕೂಡಿದೆ. ಮಳೆಗಾಲದ ವೇಳೆ ಗುಂಡಿಗಳಲ್ಲಿ ನೀರು ನಿಂತು ಕೆಸರುಮಯವಾಗುತ್ತದೆ. ಇದರಿಂದ ಬಿತ್ತನೆ ಬೀಜ, ರಸಗೊಬ್ಬರ, ಕೃಷಿ ಪರಿಕರಗಳನ್ನು ಪಡೆಯಲು ಹಾಗೂ ಇನ್ನಿತರ ಕೆಲಸ ಕಾರ್ಯ ನಿಮಿತ್ತ ರೈತ ಸಂಪರ್ಕ ಕೇಂದ್ರಕ್ಕೆ ತೆರಳಬೇಕಾದರೆ ತುಂಬ ತೊಂದರೆ ಅನುಭವಿಸುವಂತಾಗಿದೆ. ರಸ್ತೆ ನಿರ್ಮಿಸಿಕೊಡುವಂತೆ ಹಲವು ತಿಂಗಳ ಹಿಂದೆ ಪಪಂ ಮುಖ್ಯಾಧಿಕಾರಿ ಅವರಿಗೆ ಮನವಿ ಸಲ್ಲಿಸಲಾಗಿದ್ದು, ಅಗತ್ಯ ಭರವಸೆ ನೀಡಿದ್ದರು. ಆದರೆ ಈವರೆಗೂ ಯಾವುದೇ ಕ್ರಮವಾಗಿಲ್ಲ. ಆದ್ದರಿಂದ ರೈತ ಸಂಪರ್ಕ ಕೇಂದ್ರಕ್ಕೆ ರಸ್ತೆ ನಿರ್ಮಿಸಿ ಕೊಡುವಂತೆ ರೈತರು ಮನವಿ ಮಾಡಿದರು. ಇದಕ್ಕೆ ಶಾಸಕರು ಸಂಬಂಧಪಟ್ಟ ಅಧಿಕಾರಿಗಳಿಂದ ಕ್ರಿಯಾಯೋಜನೆ ತಯಾರಿಸಿ ರಸ್ತೆ ನಿರ್ಮಿಸಿ ಕೊಡುವುದಾಗಿ ಭರವಸೆ ನೀಡಿದರು.
ಸಂಘದ ಗೌರವಾಧ್ಯಕ್ಷ ರಾಜಣ್ಣ, ಪದಾಧಿಕಾರಿಗಳಾದ ಅಶೋಕ್, ಚಿನ್ನಸ್ವಾಮಿ ಹಾಗೂ ಇನ್ನಿತರರು ಇದ್ದರು.