ರೈತರ ಬೇಡಿಕೆಗೆ ಸ್ಪಂದಿಸಲು ಆಗ್ರಹ

6 vikram 5
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ರೈತ ಸಮುದಾಯ ಸಾಕಷ್ಟು ಸಂಕಷ್ಟದಲ್ಲಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತಾಪಿ ವರ್ಗದ ಜನರ ಬೇಡಿಕೆಗಳಿಗೆ ಸ್ಪಂದಿಸುವ ಮೂಲಕ ಅವರ ಕಷ್ಟಗಳ ನಿವಾರಣೆಗೆ ಮುಂದಾಗಬೇಕು ಎಂದು ರೈತ ಮುಖಂಡ ಮಲ್ಲಿಕಾರ್ಜುನ ಬಾಳನಗೌಡ್ರ ಆಗ್ರಹಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂಗಾರಿನಲ್ಲಿ ಕೀಟಬಾಧೆ, ಬೆಂಕಿ ರೋಗದಿಂದ ಕಡಲೆ ಬೆಳೆಯ ಇಳುವರಿ ಕುಸಿತ ಕಂಡಿದೆ. ಹೀಗಾಗಿ ಇಳುವರಿ ಕುಸಿತದಿಂದ ಕಂಗಾಲಾದ ರೈತರಿಗೆ ಸರ್ಕಾರಗಳು ನೆರವಿಗೆ ಬರಬೇಕು. ಸದ್ಯ ಕಡಲೆ ಬೆಳೆಗೆ ಘೋಷಿಸಿರುವ ಬೆಂಬಲ ಬೆಲೆ ಕೈ ಬಿಟ್ಟು, ಪ್ರತಿ ಕ್ವಿಂಟಾಲ್​ಗೆ ಕನಿಷ್ಠ 10 ಸಾವಿರ ರೂ. ನಿಗದಿ ಮಾಡಬೇಕು. ಇದರ ಜತೆಗೆ ಹೆಸರು ಬೆಳೆಗೆ 10 ಸಾವಿರ ರೂ., ಗೋವಿನ ಜೋಳಕ್ಕೆ 5 ಸಾವಿರ ರೂ., ಉದ್ದುಗೆ 10 ಸಾವಿರ ರೂ., ಸೋಯಾಬಿನ್​ 10 ಸಾವಿರ ರೂ., ಈರುಳ್ಳಿಗೆ 5 ಸಾವಿರ ರೂ., ಕಬ್ಬಿಗೆ 10 ಸಾವಿರ ರೂ., ಹತ್ತಿ ಹಾಗೂ ಶೇಂಗಾಕ್ಕೆ 10 ಸಾವಿರ ರೂ. ಬೆಂಬೆಲೆ ಘೋಷಿಸಬೇಕು ಎಂದು ಆಗ್ರಹಿಸಿದರು.

ಉಳಿದಂತೆ ರೈತರ ಸಾಲ ಮನ್ನಾ, ಬರ ಪರಿಹಾರ ವಂಚಿತ ರೈತರಿಗೆ ಕೂಡಲೇ ಹಣ ಜಮೆ ಮಾಡುವುದು, 2023 ಹಿಂಗಾರು ಬೆಳೆ ವಿಮೆ ತಕ್ಷಣ ಬಿಡುಗಡೆ ಮಾಡಬೇಕು. ರಾಷ್ಟ್ರೀಕೃತ ಬ್ಯಾಂಕ್​ಗಳಲ್ಲಿ 10 ಲಕ್ಷ ರೂ.ವರೆಗೆ ಶೇ.1 ಬಡ್ಡಿ ದರದಲ್ಲಿ ರೈತರಿಗೆ ಸಾಲ ನೀಡಬೇಕು. ರೈತರಿಗೆ 2000 ಲೀಟರ್​ ಡೀಸೆಲ್​ ಅರ್ಧ ಬೆಲೆಯಲ್ಲಿ ನೀಡುವುದರೊಂದಿಗೆ ರೈತರ ಸಂಕಷ್ಟ ನಿವಾರಣೆಗೆ ಮುಂದಾಗಬೇಕು ಎಂದು ಮನವಿ ಮಾಡಿದರು.

ರಾಚಯ್ಯ ಮಠದ, ಮುತ್ತು ಮದ್ನಿ, ಚಂದ್ರುಗೌಡ ಬಡ್ಡಿ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net