

ಕಲಘಟಗಿ: ತಾಲೂಕಿನ ಕಟ್ಟಡ ಕಾರ್ವಿುಕರ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಮಂಗಳವಾರ ತಹಸೀಲ್ದಾರ್ ಕಚೇರಿ ಮುಂಭಾಗದಲ್ಲಿ ಶ್ರೀರಾಮ ಕಟ್ಟಡ ಕಾರ್ವಿುಕ ಸಂಘದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ ತಹಸೀಲ್ದಾರ್ ಬಸವರಾಜ ಬೆಣ್ಣಿಶಿರೂರ ಅವರಿಗೆ ಮನವಿ ಸಲ್ಲಿಸಿದರು.
ಇತ್ತೀಚೆಗೆ ರಾಜ್ಯಾದ್ಯಂತ ನಕಲಿ ಕಾರ್ವಿುಕರ ಹಾವಳಿ ಹೆಚ್ಚಾಗಿರುವುದರಿಂದ ನಿಜವಾದ ಕಾರ್ವಿುಕರಿಗೆ ಸರ್ಕಾರದ ಸೌಲಭ್ಯಗಳು ಸಮರ್ಪಕವಾಗಿ ಸಿಗುತ್ತಿಲ್ಲ. ಇದರಿಂದ ಹೊಸ ಕಾರ್ವಿುಕರ ನೋಂದಣಿಗಾಗಿ ಪರದಾಡುವಂತಾಗಿದೆ.
ನಿಜವಾದ ಕಾರ್ವಿುಕರನ್ನು ಅಧಿಕಾರಿಗಳು ಪತ್ತೆ ಹಚ್ಚಿ ಅವರಿಗೆ ಕಾರ್ವಿುಕರ ಕಾರ್ಡ್ ದೊರೆಯುವಂತೆ ಮಾಡಬೇಕು. ಕಾರ್ವಿುಕ ಇಲಾಖೆಯ ಕಲ್ಯಾಣ ಮಂಡಳಿಯಿಂದ ಕಾರ್ವಿುಕರಿಗೆ ತೊಂದರೆ ಉಂಟಾಗುತ್ತಿದೆ ಹಾಗೂ ಮದುವೆ ಸಹಾಯಧನ, ಬಾಣಂತಿಯರ ಸಹಾಯಧನದಲ್ಲಿ ವಿಳಂಬ, ಶಿಕ್ಷಣ ಭತ್ಯೆ ಸೇರಿದಂತೆ ಇನ್ನು ಅನೇಕ ಸೌಲಭ್ಯಗಳಿಂದ ಕಾರ್ವಿುಕರು ವಂಚಿತರಾಗುತ್ತಿದ್ದಾರೆ. ಈ ಕುರಿತು ಹತ್ತಾರು ಬಾರಿ ಮೇಲಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗುತ್ತಿಲ್ಲ.
ಈಗಾಗಲೇ ನೀಡಿದ ಅದೆಷ್ಟೋ ಅರ್ಜಿಗಳನ್ನು ಕಾರ್ವಿುಕ ಇಲಾಖೆ ಅಧಿಕಾರಿಗಳು ಇಲ್ಲ ಸಲ್ಲದ ನೆಪಹೇಳಿ ತಿರಸ್ಕರಿಸಿದ್ದಾರೆ. ಆದ್ದರಿಂದ ಇದಕ್ಕೆ ಸಂಬಂಧಪಟ್ಟ ಶಾಸಕರು, ಸಚಿವರು ಹಾಗೂ ಅಧಿಕಾರಿಗಳು ತ್ವರಿತವಾಗಿ ನಮ್ಮ ಸಮಸ್ಯೆ ಬಗೆಹರಿಸಿ ನಮಗೆ ನ್ಯಾಯ ಒದಗಿಸಿಕೊಡಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಶ್ರೀರಾಮ ಕಟ್ಟಡ ಕಾರ್ವಿುಕ ಸಂಘದ ಜಿಲ್ಲಾಧ್ಯಕ್ಷ ಶಿವಾನಂದ ಅಸೂಟಿ, ಜಿಲ್ಲಾ ಉಪಾಧ್ಯಕ್ಷ ದೇವೇಂದ್ರ ಕಾಲವಾಡ, ತಾಲೂಕಾಧ್ಯಕ್ಷ ವಿಠ್ಠಲ ಲಮಾಣಿ, ಉಪಾಧ್ಯಕ್ಷ ಚಂದ್ರು ಲಮಾಣಿ, ಸದಸ್ಯರಾದ ರಾಜು ಬೆಟಗೇರಿ, ಈರಪ್ಪ ಕಣಗಾವಿ, ಮೌಲಾಸಾಬ್ ಕುಂಬಾರ, ಸಂಗನಗೌಡ ಗೋಕುಲ, ಮಾಂತೇಶ ಚಂದ್ರಣ್ಣವರ, ಶೇಖಪ್ಪ ಲಮಾಣಿ, ಇತರರಿದ್ದರು.