ಸ್ಮಶಾನಕ್ಕೆ ಜಾಗ ಮೀಸಲಿಡಲು ಒತ್ತಾಯ: ಕನ್ನಡಸೇನೆ ಕಾರ್ಯಕರ್ತರು ಮತ್ತು ಹೊಸಬೂದನೂರು ಗ್ರಾಮಸ್ಥರ ಪ್ರತಿಭಟನೆ

Demand to reserve land for cemetery Mandya
Published on

ಮಂಡ್ಯ: ತಾಲೂಕಿನ ಹೊಸಬೂದನೂರು ಗ್ರಾಮದಲ್ಲಿ ಸರ್ವೆ ನಂ.313ರ ಜಾಗವನ್ನು ಸಾರ್ವಜನಿಕರ ಸ್ಮಶಾನಕ್ಕಾಗಿ ಮೀಸಲಿಡುವಂತೆ ಒತ್ತಾಯಿಸಿ ಗ್ರಾಮಸ್ಥರು ಹಾಗೂ ಕನ್ನಡಸೇನೆ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.

ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು, ಬೆಂಗಳೂರು-ಮೈಸೂರು ಹೆದ್ದಾರಿ ಮೂಲಕ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದರು. ಬಳಿಕ ಮನವಿ ಸಲ್ಲಿಸಿದರು. ಗ್ರಾಮದಲ್ಲಿ ಸರ್ವೆ ನಂ. 313ರ ಜಾಗವು ಈ ಹಿಂದೆ ಸರ್ಕಾರಿ ಸ್ಮಶಾನವಾಗಿದ್ದು, ನಂತರ 2017ರಲ್ಲಿ ಮಕಾನ್ ಆಗಿ ಬದಲಾವಣೆಯಾಗಿದೆ. ಗ್ರಾಮಸ್ಥರು ಹೋರಾಟ ಮಾಡಿದ ನಂತರ ಜಿಲ್ಲಾಡಳಿತ ಆರ್‌ಟಿಸಿಯನ್ನು ಸರ್ಕಾರಿ ಕಟ್ಟೆಯನ್ನಾಗಿ ಇಂಡೀಕರಿಸಿದೆ ಎಂದು ಆರೋಪಿಸಿದರು.

ಅಲ್ಲಿಂದ ಇಲ್ಲಿಯವರೆವಿಗೂ ಗ್ರಾಮಸ್ಥರು ಅದೇ ಜಾಗದಲ್ಲಿ ಶವ ಸಂಸ್ಕಾರ ಮಾಡುತ್ತಿದ್ದಾರೆ. ಇತ್ತೀಚೆಗೆ ಗ್ರಾಮ ಪಂಚಾಯಿತಿ ವತಿಯಿಂದ ರ‌್ಯಾಂಪ್ ನಿರ್ಮಾಣ ಮಾಡಲಾಗುತ್ತಿತ್ತು. ಆದರೆ ತಹಸೀಲ್ದಾರ್, ರಾಜಸ್ವ ನಿರೀಕ್ಷಕರ ಮೂಲಕ ಮೌಖಿಕವಾಗಿ ರ‌್ಯಾಂಪ್ ನಿರ್ಮಾಣ ಕಾರ್ಯವನ್ನು ಸ್ಥಗಿತಗೊಳಿಸುವಂತೆ ಸೂಚಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಹಸೀಲ್ದಾರ್ ಮತ್ತು ಅಧಿಕಾರಿಗಳ ಇಂತಹ ಜನವಿರೋಧಿ ನೀತಿಯಿಂದಾಗಿ ಗ್ರಾಮಸ್ಥರು ಶವ ಸಂಸ್ಕಾರ ಮಾಡಲು ತೊಂದರೆಯಾಗಿದೆ. ತಕ್ಷಣ ಸದರಿ ಸರ್ವೇ ನಂಬರ್‌ನ ಜಾಗವನ್ನು ಸ್ಮಶಾನಕ್ಕಾಗಿ ಮೀಸಲಿಡಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಕನ್ನಡ ಸೇನೆ ಜಿಲ್ಲಾಧ್ಯಕ್ಷ ಮಂಜುನಾಥ್, ಮುಖಂಡರಾದ ಮಹಂತಪ್ಪ, ಕುಮಾರ್, ರಂಗಣ್ಣ, ಪುಟ್ಟರಾಜು, ಲಕ್ಷ್ಮಣ, ಜಯರಾಮ, ರಮೇಶ, ಧನಂಜಯ, ಚಿಕ್ಕಸ್ವಾಮಿ, ಬೋರಪ್ಪ, ಶಿವಲಿಂಗಯ್ಯ, ಶಂಕರ, ನಾಗೇಂದ್ರ, ಅಭಿಷೇಕ್, ಮೋಹನ್‌ಕುಮಾರ್, ಶಿವಲಿಂಗ, ಚಿಕ್ಕಲಿಂಗಯ್ಯ, ಬೋರ, ಬಸವರಾಜ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net