

ಮೈಸೂರು: ಚುನಾವಣೆ ಸಂದರ್ಭದಲ್ಲಿ ಮಾತು ಕೊಟ್ಟಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ಈಡೇರಿಸಬೇಕು ಹಾಗೂ ಬಿಜೆಪಿ ಅವಧಿಯಲ್ಲಿ ಜಾರಿಗೊಂಡಿರುವ ಜನ ವಿರೋಧಿ ಕಾಯ್ದೆ ರದ್ದುಗೊಳಿಸುವಂತೆ ಒತ್ತಾಯಿಸಿ ಸಂಯುಕ್ತ ಹೋರಾಟ ಕರ್ನಾಟಕದಿಂದ ನಗರದಲ್ಲಿ ಪ್ರತಿಭಟನೆ ನಡೆಯಿತು.
ಜಿಲ್ಲಾಧಿಕಾರಿ ಕಚೇರಿ ಬಳಿ ಮಂಗಳವಾರ ಪ್ರತಿಭಟನೆ ನಡೆಸಿದ ಮುಖಂಡರು, ರೈತ, ಕಾರ್ಮಿಕ, ದಲಿತ, ಯುವಜನ, ಮಹಿಳಾ ಸಮುದಾಯಗಳ ಸಮಸ್ಯೆಗಳನ್ನು ಬಗೆಹರಿಸಬೇಕು. ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಜನವಿರೋಧಿ ಕಾಯ್ದೆಗಳನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು.
ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಯೋಜನೆಗಳನ್ನು ರದ್ದುಗೊಳಿಸಿ ಜನಪರ ನೀತಿಗಳನ್ನು ಜಾರಿಗೆ ತರುವುದಾಗಿ ಸಿದ್ದರಾಮಯ್ಯ ಅವರು ಮಾತುಕೊಟ್ಟಿದ್ದರು. ಗೆದ್ದು ಮುಖ್ಯಮಂತ್ರಿಯಾದ ನಂತರವೂ ನೀಡಿದ್ದ ಭರವಸೆ ಈಡೇರಿಸಿಲ್ಲ. ಕೊಟ್ಟ ಮಾತಿಗೆ ವಿರುದ್ಧವಾಗಿ ಸರ್ಕಾರ ಸಾಗುತ್ತಿದೆ. ಬಿಜೆಪಿ ಸರ್ಕಾರ ತಂದಿದ್ದಕ್ಕೆ 9 ನೀತಿಗಳನ್ನು ರಾಜ್ಯದ ಕಾಂಗ್ರೆಸ್ ಸರ್ಕಾರವೂ ಮುಂದುವರಿಸುತ್ತಿದೆ. ಬಿಜೆಪಿ ತಂದಿದ್ದ ಜನ ವಿರೋಧಿ ನೀತಿಗಳನ್ನು ಹಾಗೆ ಉಳಿಸಿಕೊಳ್ಳುತ್ತಾ ಜನಪರ ಸರ್ಕಾರವನ್ನು ಹೇಗೆ ನೀಡುತ್ತೀರಿ. ಅವನ್ನೇ ಮುಂದುವರಿಸುವುದಾದರೆ ಅಂದು ನೀವು ಒಡ್ಡಿದ್ದ ಪ್ರತಿರೋಧಕ್ಕೆ ಆರ್ಥವಾದರೂ ಏನು ಎಂದು ಕಿಡಿಕಾರಿದರು.
ಜನಪರ ಆಡಳಿತ ನೀಡುವುದಾಗಿ ಭರವಸೆ ನೀಡಿದ್ದ ಸಿದ್ದರಾಮಯ್ಯ ಅವರು ಜನ ವಿರೋಧಿ ನೀತಿಗಳ ವಿರುದ್ಧ ಗಮನಹರಿಸದೆ ನಿರ್ಲಕ್ಷಿಸಲಾಗುತ್ತಿದೆ. ಕೊಟ್ಟ ಮಾತಿನಂತೆ ರೈತ, ಕಾರ್ಮಿಕ, ದಲಿತ, ಯುವಜನ, ಮಹಿಳಾ ಸಮುದಾಯಗಳ ಸಮಸ್ಯೆಗಳನ್ನು ಕೂಲಂಕುಷವಾಗಿ ಚರ್ಚಿಸಲು ಕೂಡಲೇ ಸಭೆ ಕರೆಯಬೇಕು. ಈ ವಿಳಂಬ ನೀತಿ ಮತ್ತು ನಿರ್ಲಕ್ಷೃ ಧೋರಣೆ ಮುಂದುವರಿದರೆ ಜನಹಿತ ರಕ್ಷಿಸಿಕೊಳ್ಳಲು ಸರ್ಕಾರದೊಂದಿಗೆ ತೀಕ್ಷ್ಣ ರೂಪದ ಸಂಘರ್ಷಗಳಿಗೆ ಇಳಿಯುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು.
ಹಕ್ಕೊತ್ತಾಯಗಳು:
ಕೇಂದ್ರ ಸರ್ಕಾರ ಈಗ ಮುಂದಿಟ್ಟಿರುವ ಕೃಷಿ ಉತ್ಪನ್ನಗಳ ಮಾರುಕಟ್ಟೆ ರಾಷ್ಟ್ರೀಯ ಚೌಕಟ್ಟು ನೀತಿಯನ್ನು ಪಂಜಾಜ್ ಮಾದರಿಯಲ್ಲಿ ತಿರಸ್ಕರಿಸುವ ತೀರ್ಮಾನ ತೆಗೆದುಕೊಳ್ಳಬೇಕು. ಈ ಹಿಂದೆ ಬಿಜೆಪಿ ಸರ್ಕಾರ ತಂದಿದ್ದ ಭೂ ತಿದ್ದುಪಡಿ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ, ಜಾನುವಾರು ತಿದ್ದುಪಡಿ ಕಾಯ್ದೆಗಳನ್ನು ರದ್ದುಗೊಳಿಸಬೇಕು. ಅಕ್ರಮ ರೀತಿಯಲ್ಲಿ ಬೆಳಗಾವಿಯಲ್ಲಿ ತೆರೆದಿರುವ ಮೊದಲ ಖಾಸಗಿ ತರಕಾರಿ ಮಾರುಕಟ್ಟೆಯನ್ನು ಕೂಡಲೇ ಬಂದ್ ಮಾಡಿಸಿ, ಹಿಂದೆ ಇದ್ದಂತೆ ಎಪಿಎಂಸಿ ಕಟ್ಟಡದಲ್ಲೇ ಮಾರುಕಟ್ಟೆಗೆ ಪುನರ್ ಚಾಲನೆ ನೀಡಬೇಕು ಎಂದು ಆಗ್ರಹಿಸಿದರು.
ಕೃಷಿ ವಿದ್ಯುತ್ ಮೀಟರ್‌ಗಳಿಗೆ ಪ್ರಿಪೇಯ್ಡ್ ಸ್ಮಾರ್ಟ್ ಮೀಟರ್ ಅಳವಡಿಸುವುದನ್ನು ಕೈಬಿಡಬೇಕು. ಕೃಷಿಗೆ ವಿದ್ಯುತ್ ಸಂಪರ್ಕ ಪಡೆಯಲು ಘೋಷಿಸಲಾಗಿರುವ ಸ್ವಯಂ ವೆಚ್ಚ ಯೋಜನೆ ರದ್ದುಪಡಿಸಬೇಕು. ವಿದ್ಯುತ್ ಕ್ಷೇತ್ರವನ್ನು ಯಾವುದೇ ಕಾರಣಕ್ಕೂ ಖಾಸಗೀಕರಿಸಬಾರದು ಎಂದು ಕೋರಿದರು.
ಬಗರ್ ಹುಕುಂ ಮತ್ತು ಅರಣ್ಯ ಭೂಮಿಗಳಲ್ಲಿ ಸಾಗುವಳಿ ಮಾಡುತ್ತಿರುವ ರೈತರಿಗೆ ಕಿರುಕುಳ ನೀಡಬಾರದು. ಚನ್ನರಾಯಪಟ್ಟಣದಲ್ಲಿ ಕೆಐಡಿಬಿಯಿಂದ ನಡೆಯುತ್ತಿರುವ ಅಕ್ರಮ ಭೂಸ್ವಾಧೀನ ಪ್ರಕ್ರಿಯೆ ಕೈಬಿಡಬೇಕು. ಬಗರ್ ಹುಕುಂ ರೈತರ ಮೇಲೆ ಭೂ ಕಬಳಿಕೆ ನೀತಿಯಡಿ ಹಾಕಿರುವ ಮೊಕದ್ದಮೆಗಳನ್ನು ರದ್ದುಪಡಿಸಬೇಕು. ಎಸ್‌ಸಿಎಸ್‌ಪಿ, ಟಿಎಸ್‌ಪಿ ಹಣದ ವಿತರಣೆ ವಿನಿಯೋಗ, ಸಾಧಕ-ಬಾಧಕಗಳು ಮತ್ತು ಆದಿವಾಸಿ-ಅಲೆಮಾರಿ ಜನಾಂಗದ ಪುನರ್ವಸತಿ ಹಾಗೂ ಮಹಿಳಾ ಸಬಲೀಕರಣ ಕುರಿತು ಸರ್ಕಾರದ ಅವಧಿಯಲ್ಲಿ ಎರಡೂವರೆ ವರ್ಷಕ್ಕೊಮ್ಮೆ ಸಾಮಾಜಿಕ ನ್ಯಾಯಕ್ಕಾಗಿ ವಿಶೇಷ ಅಧಿವೇಶನ ನಡೆಸಿ ಸಮಗ್ರ ಚರ್ಚೆ ನಡೆಸಿ ಮೌಲ್ಯಮಾಪನ ಮಾಡುವ ಕ್ರಮ ಘೋಷಿಸಬೇಕು ಎಂದು ಮನವಿ ಮಾಡಿದರು.
ಅಖಿಲ ಭಾರತ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘದ ಅಧ್ಯಕ್ಷ ಚೌಡಹಳ್ಳಿ ಜವರಯ್ಯ, ಮುಖಂಡರಾದ ಪಿ.ಮರಂಕಯ್ಯ, ನಾಗನಹಳ್ಳಿ ವಿಜಯೇಂದ್ರ, ಕಂದೇಗಾಲ ಶ್ರೀನಿವಾಸ್, ಹೆಜ್ಜಿಗೆ ಪ್ರಕಾಶ್, ಮಹದೇವ ನಾಯ್ಕ, ಎಚ್.ಎಂ.ಬಸವರಾಜು ಇತರರು ಇದ್ದರು.