ಬೀದಿದೀಪಗಳನ್ನು ದುರಸ್ತಿಗೊಳಿಸಲು ಆಗ್ರಹ

hnd-28-1 manavi
ಹುನಗುಂದ ಪಟ್ಟಣದ ರಸ್ತೆ ಮಧ್ಯದ ಬೀದಿ ದೀಪಗಳನ್ನು ದುರಸ್ತಿಗೊಳಿಸುವಂತೆ ಆಗ್ರಹಿಸಿ ಕರವೇ ಪದಾಧಿಕಾರಿಗಳು ಪುರಸಭೆ ಮ್ಯಾನೇಜರ್ ಎಂ.ಎಸ್. ಕಳ್ಳಿಗುಡ್ಡ ಅವರಿಗೆ ಮನವಿ ನೀಡಿದರು. ರೋಹಿತ ಬಾರಕೇರ, ಜಹೀರ ಸಂಗಮಕರ ಇತರರಿದ್ದರು.
Published on

ಹುನಗುಂದ: ಪಟ್ಟಣದ ರಸ್ತೆ ಮಧ್ಯದ ಬೀದಿ ದೀಪಗಳನ್ನು ರಿಪೇರಿ ಮಾಡಿಸಬೇಕೆಂದು ಆಗ್ರಹಿಸಿ ಕರವೇ ಪದಾಧಿಕಾರಿಗಳು ಪುರಸಭೆ ಎದುರು ಪ್ರತಿಭಟನೆ ನಡೆಸಿ ಪುರಸಭೆ ಮ್ಯಾನೇಜರ್ ಎಂ.ಎಸ್. ಕಳ್ಳಿಗುಡ್ಡ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.

ಪಟ್ಟಣದ ಪುರಸಭೆ ಆವರಣದಲ್ಲಿ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಕರವೇ ಅಧ್ಯಕ್ಷ ರೋಹಿತ ಬಾರಕೇರ ಮಾತನಾಡಿ, ಪಟ್ಟಣದಲ್ಲಿ ಬೀದಿ ದೀಪಗಳು ಕಳೆದ ಎರಡು ತಿಂಗಳಿಂದ ಬೆಳಕು ನೀಡುತ್ತಿಲ್ಲ. ರಾತ್ರಿ ಸಮಯದಲ್ಲಿ ಪಾದಚಾರಿಗಳು, ಬೈಕ್ ಸವಾರರು ಕತ್ತಲಲ್ಲೇ ಜೀವ ಭಯದಲ್ಲಿ ಸಂಚರಿಸುವಂತಾಗಿದೆ. ಇದರಿಂದ ಅಪಘಾತಗಳು ಸಂಭವಿಸುತ್ತಿವೆ. ಗುತ್ತಿಗೆದಾರರು ಕಳಪೆ ಬಲ್ಬಗಳನ್ನು ಅಳವಡಿಸಿದ್ದರಿಂದ ಈ ಸಮಸ್ಯೆ ಉಂಟಾಗುತ್ತಿದೆ. ಈ ಕುರಿತು ಮುಖ್ಯಾಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗುತ್ತಿಲ್ಲ ಎಂದು ದೂರಿದರು.

ಕರವೇ ಪ್ರಧಾನ ಕಾರ್ಯದರ್ಶಿ ಜಹೀರ್ ಸಂಗಮಕರ ಮಾತನಾಡಿ, ಕೂಡಲೇ ಎರಡು ದಿನಗಳಲ್ಲಿ ಬೀದಿ ದೀಪಗಳನ್ನು ದುರಸ್ತಿ ಮಾಡದಿದ್ದರೆ ಪಟ್ಟಣದ ವಿಜಯ ಮಹಾಂತೇಶ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಕರವೇ ಸಂಘಟನೆಯಿಂದ ರಸ್ತೆ ತಡೆದು ಉಗ್ರ ಹೋರಾಟ ಕೈಗೊಳ್ಳಲಾಗುವುದೆಂದು ಎಚ್ಚರಿಸಿದರು.

ಅಲ್ಲದೆ, ಪಟ್ಟಣದಲ್ಲಿ ವಾಹನಗಳ ಸಂಚಾರದಿಂದ ಅಪಾರ ಧೂಳು ಬರುತ್ತಿದ್ದು, ಪ್ರಯಾಣಿಕರಿಗೆ ತೊಂದರೆಯಾಗಿದೆ. ಕೂಡಲೇ ಸ್ವಚ್ಛತೆ ಕಾರ್ಯವನ್ನು ಪುರಸಭೆ ಮಾಡಬೇಕೆಂದು ಒತ್ತಾಯಿಸಿದರು.

ಕರವೇ ಮುಖಂಡರಾದ ಮುತ್ತಣ್ಣ ಕಲ್ಮಡಿ, ಹನುಮಂತ ಮಾದರ, ಸಂಗು ಮಾದರ, ಮಂಜುನಾಥ ಮುಂಡೇವಾಡಿ, ನಾವಿದ ಸಂದಿಮನಿ, ನಜೀರ್ ಧನ್ನೂರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net