ಮಳೆ ಮಾಪನ ದುರಸ್ತಿಗೊಳಿಸಲು ಆಗ್ರಹ

2sdp3
Published on

ಸಿದ್ದಾಪುರ: ತಾಲೂಕಿನ ಬಹುತೇಕ ಮಳೆಮಾಪನ ಯಂತ್ರಗಳನ್ನು ಸರಿಪಡಿಸಬೇಕು ಎಂದು ಆಗ್ರಹಿಸಿ ತಾಲೂಕು ಬಿಜೆಪಿ ಮಂಡಳದ ವತಿಯಿಂದ ತಹಸೀಲ್ದಾರ್ ಎಂ.ಆರ್. ಕುಲಕರ್ಣಿ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ತಾಲೂಕಿನಲ್ಲಿರುವ ಮಳೆಮಾಪನ ಯಂತ್ರಗಳು ಬಹುತೇಕ ನಿರುಪಯುಕ್ತವಾಗಿವೆ. ಇನ್ನುಳಿದ ಕೆಲವು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲವೆಂಬ ಮಾಹಿತಿ ಇದೆ. ಮಳೆಯಿಂದಾಗುವ ಅನಾಹುತಕ್ಕೆ ಹವಾಮಾನ ಆಧಾರಿತ ಬೆಳೆ ವಿಮೆ ಸೌಲಭ್ಯ ಪಡೆಯಬೇಕೆಂದರೆ ಮಳೆಮಾಪನ ಯಂತ್ರಗಳ ಕಾರ್ಯನಿರ್ವಹಣೆ ಸಮರ್ಪಕವಾಗಿರಬೇಕು. ಈ ಕುರಿತು ಗಮನ ಹರಿಸಿ ಬೆಳೆ ವಿಮೆ ಸಂಸ್ಥೆಯಾದ ಕೆಎಸ್​ಡಿಎಂಸಿಯವರಿಗೆ ಸೂಚನೆ ನೀಡಬೇಕು ಎಂದು ಜಿಲ್ಲಾಧಿಕಾರಿಗಳನ್ನು ಮನವಿಯಲ್ಲಿ ಆಗ್ರಹಿಸಲಾಗಿದೆ.

ತಾಲೂಕು ಬಿಜೆಪಿ ಮಂಡಳ ಅಧ್ಯಕ್ಷ ತಿಮ್ಮಪ್ಪ ಎಂ.ಕೆ. ಮಾತನಾಡಿ, ತಾಲೂಕಿನಲ್ಲಿ ಮೇ ತಿಂಗಳ ಆರಂಭದಿಂದಲೂ ಭಾರಿ ಮಳೆಯಾಗುತ್ತಿದೆ. ಮಳೆ ಹಾಗೂ ತೇವಾಂಶದ ಕಾರಣ ಅಡಕೆ ಫಸಲಿಗೆ ಅಲ್ಲಲ್ಲಿ ಕೊಳೆರೋಗ ಕಾಣಿಸಿಕೊಳ್ಳುತ್ತಿದೆ. ತಾಲೂಕಿನ ರೈತರು ಬೆಳೆಸಾಲದೊಂದಿಗೆ ಬೆಳೆ ವಿಮೆ ಕಂತನ್ನು ಈಗಾಗಲೇ ತುಂಬುತ್ತಿದ್ದಾರೆ. ರೈತರಿಗೆ ಬೆಳೆ ವಿಮೆಯ ಸೌಲಭ್ಯ ಸಿಗಬೇಕೆಂದರೆ ವೈಜ್ಞಾನಿಕವಾಗಿ ಮಳೆ ಮಾಪನ ಪ್ರತಿದಿನ ಆಗಬೇಕಾಗಿರುತ್ತದೆ. ಒಂದೊಮ್ಮೆ ಸಮಯಕ್ಕೆ ಸರಿಯಾಗಿ ಜೂನ್-ಜುಲೈ ತಿಂಗಳಿನಲ್ಲಿ ವಿಮಾ ಕಂಪನಿಗಳಿಗೆ ಮಾಹಿತಿ ಸಿಗದಿದ್ದರೆ ರೈತರಿಗೆ ನಷ್ಟವಾಗುತ್ತದೆ. ಈವರೆಗೆ ಮಳೆಮಾಪನದ ಟೆಂಡರ್ ಪಡೆದಿರುವ ಕಂಪನಿಯವರು ಮಳೆಮಾಪನ ಯಂತ್ರಗಳು ಯಾವ ಸ್ಥಿತಿಯಲ್ಲಿವೆ ಎನ್ನುವುದನ್ನು ಪರಿಶೀಲಿಸುವುದಾಗಲೀ ಅಥವಾ ಯಂತ್ರಗಳನ್ನು ದುರಸ್ತಿಗೊಳಿಸುವುದಾಗಲೀ ಮಾಡಿಲ್ಲ. ಈಗಾಗಲೇ ಜೂನ್ ತಿಂಗಳು ಕಳೆದಿದ್ದು, ತಾಲೂಕಿನಲ್ಲಿ ವಿಪರೀತ ಮಳೆಯಾಗುತ್ತಿದೆ. ತಾಲೂಕಿನಲ್ಲಿ ಸುರಿದಿರುವ ಮಳೆಯ ಮಾಹಿತಿಯು ರೈತರಿಗೆ ತಿಳಿಯದೇ ಆತಂಕಕ್ಕೊಳಗಾಗಿದ್ದಾರೆ ಎಂದರು.

15 ದಿನದೊಳಗೆ ಯಂತ್ರಗಳನ್ನು ಸರಿಪಡಿಸದಿದ್ದಲ್ಲಿ ರೈತರನ್ನು ಒಗ್ಗೂಡಿಸಿ ತಹಸೀಲ್ದಾರ್ ಕಚೇರಿ ಎದುರು ಬಿಜೆಪಿ ಕಾರ್ಯಕರ್ತರು ಹಾಗೂ ಪದಾಧಿಕಾರಿಗಳೊಂದಿಗೆ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಸಿದರು.

ಗುರುರಾಜ ಶಾನಭಾಗ, ನಂದನ ಬೋರ್ಕರ, ಎಸ್.ಕೆ. ಮೇಸ್ತ, ದಿವಾಕರ ನಾಯ್ಕ ಹೆಮ್ಮನಬೈಲ್, ವಿನಯ ಹೊನ್ನೆಗುಂಡಿ, ರವಿಕುಮಾರ ನಾಯ್ಕ, ಶ್ರೀಕಾಂತ ಭಟ್ಟ, ವೆಂಕಟೇಶ ಹೊಸೂರು, ಎಸ್.ಜಿ. ಹೆಗಡೆ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net