ಕ್ಯಾನ್ಸರ್ ಕೇಂದ್ರ ಪ್ರಾರಂಭಿಸಲು ಆಗ್ರಹ: ಕನ್ನಡಸೇನೆ ಸಂಘಟನೆಯಿಂದ ಮನವಿ ಸಲ್ಲಿಕೆ

Demand to reopen cancer center Mandya
Published on

ಮಂಡ್ಯ: ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್)ಯಲ್ಲಿರುವ ಕ್ಯಾನ್ಸರ್ ಕೇಂದ್ರವನ್ನು ಪುನರ್‌ಆರಂಭಿಸುವಂತೆ ಒತ್ತಾಯಿಸಿ ಕನ್ನಡಸೇನೆ ಸಂಘಟನೆಯಿಂದ ಜಿಲ್ಲಾಧಿಕಾರಿ ಡಾ.ಕುಮಾರ ಹಾಗೂ ಮಿಮ್ಸ್ ನಿರ್ದೇಶಕ ಡಾ.ನರಸಿಂಹಸ್ವಾಮಿ ಅವರಿಗೆ ಮನವಿ ಸಲ್ಲಿಸಲಾಯಿತು.

ಸಂಘಟನೆ ಜಿಲ್ಲಾಧ್ಯಕ್ಷ ಎಚ್.ಸಿ.ಮಂಜುನಾಥ್ ನೇತೃತ್ವದಲ್ಲಿ ಮನವಿ ಸಲ್ಲಿಸಿ ತ್ವರಿತವಾಗಿ ಕ್ರಮವಹಿಸುವಂತೆ ಆಗ್ರಹಿಸಿದರು. ಸುಮಾರು 57 ಕೋಟಿ ರೂ ವೆಚ್ಚದ ಕ್ಯಾನ್ಸರ್ ಕೇಂದ್ರ ಕಳೆದ ಮೂರ‌್ನಾಲ್ಕು ವರ್ಷದಿಂದ ನನೆಗುದಿಗೆ ಬಿದ್ದಿದೆ. ಪರಿಣಾಮ ಕ್ಯಾನ್ಸರ್ ರೋಗಿಗಳಿಗೆ ದೊಡ್ಡ ಮಾರಕವಾಗಿದೆ. ಚಿಕಿತ್ಸೆ ನೀಡಬೇಕಾದ ಜಿಲ್ಲಾಸ್ಪತ್ರೆ ಎಲ್ಲ ಸವಲತ್ತನ್ನು ಪಡೆದರೂ ಪ್ರಾರಂಭಿಸದೆ ಧೋರಣೆಯನ್ನು ತೋರುತ್ತಿದೆ. ಕ್ಯಾನ್ಸರ್ ರೋಗಿಗಳು ಪಡೆಯುತ್ತಿರುವ ಕಷ್ಟವನ್ನು ನೋಡಿದರೆ ಕಣ್ಣೀರು ಬರುತ್ತದೆ. ರೋಗಿಗಳು ಚಿಕಿತ್ಸೆಗಾಗಿ ಬೆಂಗಳೂರು-ಮೈಸೂರಿಗೆ ಅಲೆದಾಡಬೇಕಾಗಿದೆ. ಮತ್ತೊಂದೆಡೆ ಕೋಟ್ಯಂತರ ರೂ ಮೌಲ್ಯದ ಯಂತ್ರೋಪಕರಣ ತುಕ್ಕು ಹಿಡಿಯುತ್ತಿವೆ. ಆದ್ದರಿಂದ ತುರ್ತಾಗಿ ಕೇಂದ್ರ ಪ್ರಾರಂಭಿಸಿ ರೋಗಿಗಳಿಗೆ ಚಿಕಿತ್ಸೆ ನೀಡಬೇಕು. ಇಲ್ಲದಿದ್ದರೆ ಮಿಮ್ಸ್ ಎದುರು ನಿರಂತರ ಧರಣಿ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಇನ್ನೊಂದೆಡೆ ಹೊಂಬಾಳೆ ಟ್ರಸ್ಟ್‌ನಿಂದ ಕೊಡುಗೆಯಾಗಿ ನೀಡಿರುವ ಸರ್ಜಿಕಲ್ ಐಸಿಯು ಕೇಂದ್ರವನ್ನು ಮುಚ್ಚಲಾಗಿದೆ. ಈ ಬಗ್ಗೆ ಪ್ರಶ್ನಿಸಿದರೆ ಇಲ್ಲಸಲ್ಲದ ನೆಪ ಹೇಳಲಾಗುತ್ತಿದೆ. ಮಿಮ್ಸ್‌ಗೆ ಮಂಡ್ಯ ಮಾತ್ರವಲ್ಲದೆ ರಾಮನಗರ, ತುಮಕೂರು, ಮೈಸೂರು, ಚಾಮರಾಜನಗರ ಜಿಲ್ಲೆಯ ಜನರು ಕೂಡ ಬಂದು ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಐಸಿಯು ಕೇಂದ್ರ ಬಂದ್ ಮಾಡುವುದು ಸರಿಯಲ್ಲ. ಈ ಬಗ್ಗೆ ಖಂಡನೆ ವ್ಯಕ್ತವಾದ ಬೆನ್ನಲೇ ಐಸಿಯು ಕೇಂದ್ರದ ಬಾಗಿಲು ತೆರೆಯಲಾಗಿದೆ. ಇನ್ನೊಮ್ಮೆ ಬಂದ್ ಮಾಡಬಾರದು. ಮಾತ್ರವಲ್ಲದೆ ಮಿಮ್ಸ್‌ಗೆ ಇನ್ನಷ್ಟು ಸೌಲಭ್ಯವನ್ನು ಒದಗಿಸಲು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಸೇರಿದಂತೆ ಶಾಸಕರು ಕ್ರಮ ವಹಿಸುವಂತೆ ಆಗ್ರಹಿಸಿದರು.

ಕನ್ನಡ ಸೇನೆಯ ರಾಜ್ಯಸಂಚಾಲಕಿ ದೇವಮ್ಮ, ಮಹಿಳಾಧ್ಯಕ್ಷೆ ಸೌಭಾಗ್ಯಾ, ಸಂಘಟನಾ ಕಾರ್ಯದರ್ಶಿ ಪವಿತ್ರಾ, ಜಿ.ಮಹಾಂತಪ್ಪ, ಶಿವಾಲಿ, ಮಂಜುನಾಥ್, ರವಿ, ರಮೇಶ್, ಶಿವರಾಜ್, ಪ್ರಜ್ವಲ್, ಯರಹಳ್ಳಿ ಕುಮಾರ್, ಮಹೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net