ಹಿಂದು ಜಾತಿಗಳೊಂದಿಗೆ ಕ್ರೈಸ್ತರ ಹೆಸರು ಕೈ ಬಿಡಲು ಆಗ್ರಹ; ಸರ್ಕಾರಕ್ಕೆ ಹಿಂದು ಹಿತರಕ್ಷಣ ಸಮಿತಿ ಒತ್ತಾಯ

hhv
Published on

ಬೆಂಗಳೂರು: ರಾಜ್ಯ ಸರ್ಕಾರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಹೆಸರಲ್ಲಿ ನಡೆಸುತ್ತಿರುವ ಜಾತಿ ಸಮೀಕ್ಷೆಯಲ್ಲಿ ಹೊಸ ಕ್ರೈಸ್ತ ಜಾತಿಗಳನ್ನು ಸೃಷ್ಟಿಸಿ ಗೊಂದಲ ಸೃಷ್ಟಿಸಿದ್ದು, ಕ್ರೈಸ್ತರನ್ನು ಹಿಂದು ಜಾತಿಗಳ ನಡುವೆ ಎಳೆದು ತಂದು ಎಲ್ಲ ಸಮಾಜಗಳನ್ನು ದಿಕ್ಕು ತಪ್ಪಿಸುತ್ತಿದೆ ಎಂದು ಕರ್ನಾಟಕ ಹಿಂದು ಹಿತರಕ್ಷಣ ವೇದಿಕೆ ಆರೋಪಿಸಿಸಿದೆ.

ಕರ್ನಾಟಕದಲ್ಲಿ ಜಾರಿಯಲ್ಲಿರುವ ಮತಾಂತರ ನಿರ್ಬಂಧ ಕಾಯ್ದೆಯನ್ನು ಸರ್ಕಾರವೇ ದುರ್ಬಲಗೊಳಿಸುತ್ತಿದೆ . ದಲಿತರೂ , ಒಬಿಸಿಯವರೂ ಸೇರಿದಂತೆ ಹಿಂದು ಜಾತಿಗಳನ್ನು ಒಡೆಯುವುದೇ ರಾಜಕಾರಣದ ನೀತಿಯಾಗಿದೆ . ಕುರುಬ ಕ್ರೈಸ್ತ , ಮಡಿವಾಳ ಕ್ರೈಸ್ತ , ಮಾದಿಗ ಕ್ರೈಸ್ತ , ಲಿಂಗಾಯತ ಕ್ರೈಸ್ತ , ಒಕ್ಕಲಿಗ ಕ್ರೈಸ್ತ ಸೇರಿದಂತೆ 48 ಹೊಸ ಕ್ರೈಸ್ತ ಜಾತಿಗಳನ್ನು ಹುಟ್ಟುಹಾಕಿ, ಕ್ಯಾಥೋಲಿಕ್ , ಪ್ರೊಟೆಸ್ಟೆಂಟ್ , ನ್ಯೂ ಲೈಫ್ , ಬ್ಯಾಪ್ಟಿಸ್ಟ್ ಇತ್ಯಾದಿ ಕ್ರೈಸ್ತರ ಮೂಲ ಜಾತಿಗಳನ್ನು ಕೈಬಿಟ್ಟಿದೆ ಎಂದು ವೇದಿಕೆ ಆಕ್ಷೇಪ ವ್ಯಕ್ತಪಡಿಸಿದೆ.

ಕಾಂತರಾಜು ಆಯೋಗ , ನಾಗಮೋಹನ್ ದಾಸ್ ಆಯೋಗದ ವರದಿಯನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಳ್ಳುವಲ್ಲಿ ವಿಫಲವಾಗಿರುವ ಸರ್ಕಾರ ಸಾಮಾಜಿಕ ನ್ಯಾಯದ ವಿಷಯವನ್ನು ಮತಬ್ಯಾಂಕ್ ರಾಜಕಾರಣಕ್ಕೆ ಬಳಸಿಕೊಳ್ಳುತ್ತಿದೆ . ಹಿಂದೂ ಸಮುದಾಯಗಳೊಂದಿಗೆ ಕ್ರೈಸ್ತ ಮತ ಪದ ಸೇರಿಸಿರುವುದನ್ನು ಸಂಪೂರ್ಣವಾಗಿ ತೆಗೆದು ಹಾಕಬೇಕು ಎಂದು ಹಿಂದು ಹಿತರಕ್ಷಣ ವೇದಿಕೆ ಒತ್ತಾಯಿಸಿದೆ.

ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಹಿಂದು ಹಿತಸಂರಕ್ಷಣೆ ವೇದಿಕೆ ಮನವಿ ಸಲ್ಲಿಸಿತು. ಸಂಯೋಜಕ ಗೋವರ್ಧನ್, ಸಹಸಂಯೋಜಕ ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net