ಜಾತಿ ಪ್ರಮಾಣ ಪತ್ರದ ಗೊಂದಲ ನಿವಾರಣೆಗೆ ಆಗ್ರಹ

aadidravida
Published on

ಮಡಿಕೇರಿ: ತುಳು ಭಾಷಿಕ ಆದಿ ದ್ರಾವಿಡ ಪರಿಶಿಷ್ಟ ಜಾತಿ ಬಾಂಧವರ ಬೇಡಿಕೆಗಳಿಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ. ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ತುಳು ಭಾಷಿಕ ಆದಿ ದ್ರಾವಿಡ ಸಮುದಾಯದವರಿಗೆ ೮ ವಿವಿಧ ರೀತಿಯ ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ನೀಡಲಾಗುತ್ತಿದ್ದು, ಇದರಿಂದ ತೊಂದರೆ ಎದುರಾಗಿದೆ ಎಂದು ರಾಜ್ಯ ಆದಿ ದ್ರಾವಿಡ ಸಮಾಜ ಸೇವಾ ಸಂಘದ ರಾಜ್ಯಾಧ್ಯಕ್ಷ ಎಚ್.ಎಂ.ಸೋಮಪ್ಪ ಆರೋಪಿಸಿದರು.

ಕೊಡಗು ಜಿಲ್ಲೆಯಲ್ಲಿ ಸುಮಾರು ೩೦ ಸಾವಿರ ಮಂದಿ ತುಳು ಭಾಷಿಕ ಆದಿ ದ್ರಾವಿಡ ಪರಿಶಿಷ್ಟ ಜಾತಿ ಜನರಿದ್ದಾರೆ. ಆದಿ ದ್ರಾವಿಡ ಪರಿಶಿಷ್ಟ ಜಾತಿ ಎಂದು ಜಾತಿ ಪ್ರಮಾಣಪತ್ರ ನೀಡಲು ಸರಕಾರ ಕ್ರಮ ಕೈಗೊಳ್ಳಬೇಕೆಂದು ಕಳೆದ ಅನೇಕ ವರ್ಷಗಳಿಂದ ಸಂಘಟನೆ ಮೂಲಕ ಒತ್ತಾಯಿಸುತ್ತಾ ಬರಲಾಗುತ್ತಿದೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಸರ್ಕಾರ ನಿರ್ದೇಶನ ನೀಡಿದೆ. ಜಿಲ್ಲಾಡಳಿತ ತಾಲೂಕು ಕಚೇರಿಗಳಿಗೆ ಆದೇಶ ಮಾಡಿ ಆದಿ ದ್ರಾವಿಡ ಎಂದು ಜಾತಿ ಪ್ರಮಾಣಪತ್ರ ನೀಡಲು ಕ್ರಮ ಕೈಗೊಳ್ಳಬೇಕೆಂದು ತಿಳಿಸಿದೆ. ಆದರೆ, ಕೊಡಗು ಜಿಲ್ಲೆಯಲ್ಲಿರುವ ತುಳು ಭಾಷಿಕ ಆದಿ ದ್ರಾವಿಡ ಜನಾಂಗ ಬಾಂಧವರಿಗೆ ಇಲ್ಲಿಯವರೆಗೆ ಆದಿ ದ್ರಾವಿಡ ಪರಿಶಿಷ್ಟ ಜಾತಿ ಎಂದು ಜಾತಿ ಪ್ರಮಾಣಪತ್ರ ದೊರೆತ್ತಿಲ್ಲ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಕೊಡಗು ಸೇರಿದಂತೆ ಚಿಕ್ಕಮಗಳೂರು, ಹಾಸನ, ಶಿವಮೊಗ್ಗ, ದಕ್ಷಿಣ ಕನ್ನಡ, ಕುಂದಾಪುರ ಸೇರಿದಂತೆ ಇತರ ಜಿಲ್ಲಾ ವ್ಯಾಪ್ತಿಯಲ್ಲಿ ಒಟ್ಟು ೧೨ ಲಕ್ಷ ಆದಿದ್ರಾವಿಡ ಸಮುದಾಯದ ಜನ ಇದ್ದು, ಆದಿ ದ್ರಾವಿಡ ಸಮೂಹ ಜಾತಿ ಪ್ರಮಾಣ ಪತ್ರದ ವಿಚಾರದಲ್ಲಿ ಗೊಂದಲಕ್ಕೆ ಸಿಲುಕಿದೆ. ಏಕರೂಪದ ಆದಿ ದ್ರಾವಿಡ ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ನೀಡುವ ಮೂಲಕ ಸಮಸ್ಯೆ ಬಗೆಹರಿಸಲು ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.

ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ೮ ವಿವಿಧ ರೀತಿಯ ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ನೀಡಲಾಗುತ್ತಿದೆ. ತಪ್ಪಾಗಿ ಜಾತಿ ನಮೂದು ಮಾಡುತ್ತಿರುವುದರಿಂದ ಆದಿದ್ರಾವಿಡ ಜನಾಂಗದ ಮಕ್ಕಳಿಗೆ ಶಾಲೆಗಳಲ್ಲಿ ಸರಕಾರದ ಸೌಲಭ್ಯಗಳು ದೊರೆಯುತ್ತಿಲ್ಲ. ಸರ್ಕಾರ ಹಾಗೂ ಜನಪ್ರತಿನಿಧಿಗಳು ನೀಡುತ್ತಿರುವ ಭರವಸೆಗಳು ಯಾವುದೂ ಈಡೇರುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅವರು, ಆದ್ದರಿಂದ ರಾಜ್ಯ ಆದಿ ದ್ರಾವಿಡ ಸಮಾಜ ಸೇವಾ ಸಂಘದ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಲು ನಿರ್ಧರಿಸಿದ್ದೇವೆ ಎಂದು ಹೆಚ್.ಎಂ.ಸೋಮಪ್ಪ ತಿಳಿಸಿದರು.

ಸಂಘದ ರಾಜ್ಯ ಕಾರ್ಯಾಧ್ಯಕ್ಷ ರಾಮ್‌ಕುಮಾರ್ ಪಿ.ಮಾತನಾಡಿ ಪರಿಶಿಷ್ಟ ಜಾತಿವಾರು ಪಟ್ಟಿಗಳ ಉಪ ಜಾತಿ ಆದಿ ದ್ರಾವಿಡ(ತುಳು ಭಾಷಿಕ)ರಿಗೆ ಮೀಸಲಾತಿ ವರ್ಗೀಕರಣ ಅನುಪಾತದಡಿಯಲ್ಲಿ ಗರಿಷ್ಠ ಪ್ರಮಾಣದಲ್ಲಿ ಹಂಚಿಕೆ ಮಾಡಬೇಕು. ನಿಷೇಧಿತ, ನಿಂದನಾತ್ಮಕ, ಬೈಗುಳ ಪದ ಮನ್ಸ ಜಾತಿಯನ್ನು ಜಾತಿವಾರು ಪಟ್ಟಿಯಲ್ಲಿ ಸೇರ್ಪಡೆ ಗೊಳಿಸಬಾರದು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ರಾಜ್ಯ ಗೌರವಾಧ್ಯಕ್ಷ ಬಿ.ಶಂಕರ್, ಜಿಲ್ಲಾ ಉಪಾಧ್ಯಕ್ಷ ಪಿ.ಎಲ್.ಸುರೇಶ್, ವಿರಾಜಪೇಟೆ ತಾಲೂಕು ಕಾರ್ಯದರ್ಶಿ ಎ.ಲಲಿತ, ಮಡಿಕೇರಿ ತಾಲ್ಲೂಕು ಅಧ್ಯಕ್ಷ ಪಿ.ಟಿ.ರವಿ ಪಾಪು ಹಾಗೂ ಪ್ರಮುಖರಾದ ಜಯೇಂದ್ರ ಕೋಟ್ಯಾನ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net